ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧಾರಿ ಮುಸ್ಲಿಂ ಮುಖಂಡ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ಕಾರ್ಯಕ್ರಮವು ಕೋಮು ಸೌಹಾರ್ದತೆ ಮತ್ತು ವೈವಿಧ್ಯಮಯ ಪ್ರಾತಿನಿಧ್ಯಕ್ಕೆ ಸಾಕ್ಷಿಯಾಗಿದೆ. ನಿನ್ನೆ (ಸೋಮವಾರ) ಕುಷ್ಟಗಿಯಲ್ಲಿ ಆಯೋಜಿಸಲಾಗಿದ್ದ ಈ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಮುಸ್ಲಿಂ ಮುಖಂಡ ಲಾಡ್ ಸಾಬ್ ಕೊಳ್ಳಿ ಅವರು ಸಂಘದ ಪೂರ್ಣ ಗಣವೇಷ (ಖಾಕಿ ಪ್ಯಾಂಟ್, ಬಿಳಿ ಶರ್ಟ್) ಧರಿಸಿ ಭಾಗವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಕುಷ್ಟಗಿಯ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ನಡೆದ ಶಿಸ್ತುಬದ್ಧ ಪಥಸಂಚಲನದಲ್ಲಿ ಲಾಡ್ ಸಾಬ್ ಕೊಳ್ಳಿ ಅವರು ಇತರ ಸ್ವಯಂಸೇವಕರೊಂದಿಗೆ ಸಾಲಿನಲ್ಲಿ ಹೆಜ್ಜೆ ಹಾಕಿದರು.

“ನಾನು ಬಿಜೆಪಿಯಲ್ಲಿದ್ದೇನೆ, ಗಣವೇಷ ಹಾಕ್ತೀನಿ!”: ಲಾಡ್ ಸಾಬ್ ಕೊಳ್ಳಿ

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಲಾಡ್ ಸಾಬ್ ಕೊಳ್ಳಿ,   “ನಾನು ಭಾರತೀಯ ಜನತಾ ಪಾರ್ಟಿಯಲ್ಲಿದ್ದೇನೆ (BJP). ಹಾಗಾಗಿ ನಾನು ಆರ್‌ಎಸ್‌ಎಸ್‌ನ ಗಣವೇಷ ಧರಿಸಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿದ್ದೇನೆ,” ಎಂದು ಹೆಮ್ಮೆಯಿಂದ ಸ್ಪಷ್ಟಪಡಿಸಿದ್ದಾರೆ. ನಿನ್ನೆ ನಡೆದ ಈ ಬೃಹತ್ ಪಥಸಂಚಲನ ಕಾರ್ಯಕ್ರಮದಲ್ಲಿ ಕುಷ್ಟಗಿ ಕ್ಷೇತ್ರದ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಸಹ ಸಕ್ರಿಯವಾಗಿ ಭಾಗವಹಿಸಿದ್ದರು.

ಇದನ್ನೂ ಓದಿ: ನನ್ನ ಪ್ರೀತಿಯ RSS ಸ್ವಯಂಸೇವಕರೇ … ನನ್ನ ಈ ಸಲಹೆಯನ್ನು ನೀವು ಪಾಲಿಸಲೇಬೇಕು: ವಿಜಯದಶಮಿ ಪಥಸಂಚಲನಕ್ಕೆ ಆದೇಶ ನೀಡಿದ ಖರ್ಗೆ

ಕುಷ್ಟಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ಸ್ವಯಂಸೇವಕರು ಶಿಸ್ತಿನಿಂದ ಪಥಸಂಚಲನ ನಡೆಸಿದ್ದು, ಮುಸ್ಲಿಂ ಮುಖಂಡರೊಬ್ಬರು ಆರೆಸ್ಸೆಸ್ ಗಣವೇಷ ಧರಿಸಿ ಪಾಲ್ಗೊಂಡಿರುವುದು ಸ್ಥಳೀಯವಾಗಿ ಹಾಗೂ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಮತ್ತು ಕೌತುಕಕ್ಕೆ ಕಾರಣವಾಗಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ