ಸೋನಭದ್ರ : ಒಂದೇ ಒಂದು ಮಹಡಿ ಕೆಳಗೆ ಇಳಿದು ಬಂದು ಐಸ್‌ಕ್ರೀಂ ಖರೀದಿಸಲು ಸೋಮಾರಿತನ ಪ್ರದರ್ಶಿಸಿದ ವ್ಯಕ್ತಿಯೊಬ್ಬರು, ನಿಂತ ಜಾಗದಿಂದಲೇ ಕೈಚಾಚಲು ಹೋಗಿ ಬಾಲ್ಕನಿಯಿಂದ ನೇರ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ರೋಮಾಂಚನಕಾರಿ ಹಾಗೂ ಆತಂಕಕಾರಿ ಘಟನೆಯೊಂದು ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ. ಈ ಇಡೀ ಘಟನೆಯು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕಂಡುಬರುವಂತೆ, ವ್ಯಕ್ತಿಯೊಬ್ಬರು ತಮ್ಮ ಮನೆಯ ಮೊದಲ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಬೀದಿ ವ್ಯಾಪಾರಿಯೊಬ್ಬರು ಐಸ್‌ಕ್ರೀಂ ತಳ್ಳುಗಾಡಿ ತಳ್ಳಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ವ್ಯಕ್ತಿಗೆ ತಕ್ಷಣವೇ ಐಸ್‌ಕ್ರೀಂ ತಿನ್ನುವ ಆಸೆಯಾಗಿದೆ. ಕೂಡಲೇ ಅವರು ಐಸ್‌ಕ್ರೀಂ ವ್ಯಾಪಾರಿಯನ್ನು ಕೂಗಿ ಕರೆದಿದ್ದಾರೆ. ಆದರೆ, ಮೆಟ್ಟಿಲು ಇಳಿದು ಕೆಳಗೆ ಬರುವ ಬದಲು ಬಾಲ್ಕನಿಯ ಅಂಚಿನಲ್ಲಿ ನಿಂತು ಕೆಳಗಿನಿಂದಲೇ ಐಸ್‌ಕ್ರೀಂ ಪಡೆಯಲು ಕೈಚಾಚಿದ್ದಾರೆ.

ಕೆಳಗಿದ್ದ ವ್ಯಾಪಾರಿಯು ಐಸ್‌ಕ್ರೀಂ ನೀಡಲು ತನ್ನ ಕೈಯನ್ನು ಮೇಲಕ್ಕೆ ಚಾಚಿದ್ದಾನೆ. ಇದನ್ನು ತಲುಪಲು ಬಾಲ್ಕನಿಯ ಗ್ರಿಲ್ ಅಥವಾ ಗೋಡೆಯ ಮೇಲೆ ಅತಿಯಾಗಿ ಮುಂದಕ್ಕೆ ವಾಲಿ ಒರಗಿದಾಗ, ಆ ವ್ಯಕ್ತಿ ಇದ್ದಕ್ಕಿದ್ದಂತೆ ನಿಯಂತ್ರಣ ಮತ್ತು ಸಮತೋಲನವನ್ನು ಕಳೆದುಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಅವರು ಮೊದಲ ಮಹಡಿಯಿಂದ ನೇರವಾಗಿ ಕೆಳಗಿನ ಕಾಂಕ್ರೀಟ್ ರಸ್ತೆಗೆ ಬಿದ್ದಿದ್ದಾರೆ.
ವ್ಯಕ್ತಿ ರಸ್ತೆಗೆ ಬೀಳುತ್ತಿದ್ದಂತೆಯೇ ಗಾಬರಿಗೊಂಡ ಐಸ್‌ಕ್ರೀಂ ವ್ಯಾಪಾರಿ ಭಯದಿಂದ ಕಿರುಚಾಡಿದ್ದಾರೆ. ಶಬ್ದ ಕೇಳಿ ತಕ್ಷಣವೇ ಮನೆಯ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ರಸ್ತೆಗೆ ಧಾವಿಸಿ ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಅವರಿಗೆ ತೀವ್ರ ನಿಗಾ ಘಟಕದಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯಕ್ಕೆ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಗ್ಲೆಂಡ್‌ನಲ್ಲಿ ‘ಗುಜರಿ’ಗೆ ಹಾಕಿದ್ದ ಜಾಗ್ವಾರ್ ವಿಮಾನಗಳ ಮೇಲೆ ಭಾರತದ ಕಣ್ಣು
ಈ ಭೀಕರ ಸಿಸಿಟಿವಿ ದೃಶ್ಯಾವಳಿ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ಅಲರ್ಟ್ ಆದ ಸೋನಭದ್ರ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದಾರೆ. ವೈರಲ್ ವಿಡಿಯೋದಲ್ಲಿರುವ ವ್ಯಕ್ತಿಗೆ ತಲೆ ಹಾಗೂ ದೇಹದ ಭಾಗಗಳಿಗೆ ತೀವ್ರವಾದ ಪೆಟ್ಟಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕೇವಲ ಐಸ್‌ಕ್ರೀಂ ಆಸೆಗಾಗಿ ಮತ್ತು ಒಂದು ನಿಮಿಷದ ಸೋಮಾರಿತನದಿಂದಾಗಿ ಜೀವವೇ ಕುತ್ತಿಗೆ ಬಂದು ನಿಂತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

