ಬೆಂಗಳೂರು : ರಾಜಧಾನಿಯ ಪಾದಚಾರಿಗಳಿಗೆ ಮುಕ್ತ ಹಾಗೂ ಸುರಕ್ಷಿತ ರಸ್ತೆ ಕಲ್ಪಿಸಲು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಕ್ರಮ ಕೈಗೊಂಡಿದೆ. ಬೆಂಗಳೂರು ನಗರದಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಫುಟ್‌ಪಾತ್ ಒತ್ತುವರಿ ತೆರವು’ ಆಂದೋಲನಕ್ಕೆ ಬುಧವಾರ ಮುಂಜಾನೆ ಜಯನಗರದಲ್ಲಿ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು, ಒತ್ತುವರಿದಾರರ ವಿರುದ್ಧ ಜಿಬಿಎ ಅಧಿಕಾರಿಗಳು ಮುಲಾಜಿಲ್ಲದೆ ಕಣಕ್ಕಿಳಿದಿದ್ದಾರೆ.
ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗಿನ ಮುಖ್ಯ ರಸ್ತೆಯ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿದ್ದ ಅಂಗಡಿಗಳು, ವಾಣಿಜ್ಯ ಮಳಿಗೆಗಳ ಅಕ್ರಮ ವಿಸ್ತರಣೆಗಳು ಮತ್ತು ಕಟ್ಟಡ ಕಾಮಗಾರಿ ನಡೆಸಲು ತಂದು ಹಾಕಲಾಗಿದ್ದ ಭಾರಿ ಪ್ರಮಾಣದ ಮರಳು, ಕಲ್ಲು ಸೇರಿದಂತೆ ಇತರೆ ಸಾಮಗ್ರಿಗಳನ್ನು ಸ್ಥಳದಲ್ಲೇ ಮುಟ್ಟುಗೋಲು ಹಾಕಿಕೊಂಡು ತೆರವುಗೊಳಿಸಲಾಗುತ್ತಿದೆ. ಪಾದಚಾರಿಗಳ ಹಕ್ಕನ್ನು ಕಸಿದುಕೊಂಡು, ಅವರು ಮುಖ್ಯ ರಸ್ತೆಯಲ್ಲಿ ನಡೆದಾಡುವಂತೆ ಮಾಡಿ ಅಪಘಾತಗಳಿಗೆ ಕಾರಣವಾಗುತ್ತಿದ್ದ ಒತ್ತುವರಿದಾರರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

“ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಇಂದು ತೆರವುಗೊಳಿಸಲಾದ ಜಾಗದಲ್ಲಿ ಭವಿಷ್ಯದಲ್ಲಿ ಮತ್ತೊಮ್ಮೆ ಒತ್ತುವರಿ ಮಾಡಲು ಪ್ರಯತ್ನಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು” ಎಂದು ಬೃಹತ್ ಬೆಂಗಳೂರು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಈ ವಲಯದಾದ್ಯಂತ ನಿರಂತರ ನಿಗಾ ವಹಿಸಲು ಪ್ರತ್ಯೇಕ ತಂಡವನ್ನು ನೇಮಕ ಮಾಡಲಾಗಿದೆ. ಬಿಬಿಎಂಪಿ ಮತ್ತು ಜಿಬಿಎ ಜಂಟಿಯಾಗಿ ನಡೆಸುತ್ತಿರುವ ಈ ಪ್ರಶಂಸನೀಯ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಪಾದಚಾರಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

