ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ (Doda) ಜಿಲ್ಲೆಯ ಹಲವೆಡೆ ಸಂಭವಿಸಿರುವ ಭೀಕರ ಮೇಘಸ್ಫೋಟದಿಂದಾಗಿ (Cloudburst) ಹಠಾತ್ ಪ್ರವಾಹ ಉಂಟಾಗಿದ್ದು, ಭಲೇಸಾ (Bhalesa) ಪ್ರದೇಶ ತೀವ್ರವಾಗಿ ತತ್ತರಿಸಿದೆ. ಮುದ್ದತ್ತಾದ ಮಳೆ ಹಾಗೂ ಪ್ರವಾಹದ ಪರಿಸ್ಥಿತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಕಿಶ್ತ್ವಾರ್‌ನಲ್ಲಿ ನಡೆಯುತ್ತಿದ್ದ ಪ್ರಸಿದ್ಧ ‘ಮಚೈಲ್ ಮಾತಾ ಯಾತ್ರೆ’ ಮತ್ತು ‘ಮಿಂಧಲ್ ಮಾತಾ ಯಾತ್ರೆ’ಯನ್ನು ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಭಲೇಸಾ ವಲಯದಲ್ಲಿ ಉಕ್ಕಿ ಹರಿದ ಪ್ರವಾಹದ ನೀರು ಅಪಾರ ಪ್ರಮಾಣದ ಕೆಸರು ಹಾಗೂ ಕಲ್ಲು-ಮಣ್ಣುಗಳನ್ನು ಹೊತ್ತು ತಂದಿದ್ದು, ಪ್ರಮುಖ ರಸ್ತೆಗಳನ್ನು ಸಂಪೂರ್ಣವಾಗಿ ಮುಚ್ಚಿಹಾಕಿದೆ. ಇದರಿಂದಾಗಿ ದೋಡಾ ಜಿಲ್ಲೆಯ ಒಳಗಿನ ಹಲವು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳನ್ನು ಮರುಸ್ಥಾಪಿಸಲು ಮತ್ತು ಬಿದ್ದಿರುವ ಅವಶೇಷಗಳನ್ನು ತೆರವುಗೊಳಿಸಲು ಆಡಳಿತವು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಅನಗತ್ಯ ಪ್ರಯಾಣ ಮಾಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರವಾಹದ ಭೀತಿ ಮತ್ತು ರಸ್ತೆಗಳು ಜಾರುತ್ತಿರುವುದರಿಂದ ಕಿಶ್ತ್ವಾರ್ ಜಿಲ್ಲಾಡಳಿತವು ಮಚೈಲ್ ಮಾತಾ ಹಾಗೂ ಮಿಂಧಲ್ ಮಾತಾ ಯಾತ್ರೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಭಕ್ತಾದಿಗಳು ಸದ್ಯಕ್ಕೆ ತೀರ್ಥಯಾತ್ರೆಯನ್ನು ಕೈಗೊಳ್ಳಬಾರದು ಹಾಗೂ ಸುರಕ್ಷಿತ ಸ್ಥಳಗಳಲ್ಲೇ ಉಳಿದುಕೊಂಡು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಕೋರಲಾಗಿದೆ.
ಇದನ್ನೂ ಓದಿ: ಟಿ ಸಿ ವಿಚಾರದ ಜಗಳದಲ್ಲಿ ಶಿಕ್ಷಕನ ಎದೆಗೆ ಚಾಕು ಇರಿದ ಅಪ್ರಾಪ್ತ ವಿದ್ಯಾರ್ಥಿ!; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!
ಕಳೆದ ವರ್ಷ ಇದೇ ದೋಡಾ ಜಿಲ್ಲೆಯ ಪಕ್ಕದಲ್ಲಿರುವ ಕಿಶ್ತ್ವಾರ್‌ನ ಚೋಸಿಟಿ (Chositi) ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಮೇಘಸ್ಫೋಟ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆ ದುರಂತದಲ್ಲಿ ಇಬ್ಬರು ಸಿಐಎಸ್‌ಎಫ್ (CISF) ಯೋಧರು ಸೇರಿದಂತೆ ಕನಿಷ್ಠ 45 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 167 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಚಾಂಡಿ ಮಾತಾ ದೇವಸ್ಥಾನಕ್ಕೆ ಹೋಗುವ ಮಚೈಲ್ ಮಾತಾ ಯಾತ್ರೆಯ ಮಾರ್ಗದಲ್ಲೇ ಆ ಘಟನೆ ನಡೆದು ಇಡೀ ಯಾತ್ರಾ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಹಳೆಯ ಕಹಿ ನೆನಪು ಹಾಗೂ ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಆಡಳಿತ ಮಂಡಳಿ ತಕ್ಷಣವೇ ಕಠಿಣ ನಿರ್ಧಾರ ಕೈಗೊಂಡಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

