ಛತ್ರಪತಿ ಸಂಭಾಜಿನಗರ : ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವರ್ಗಾವಣೆ ಪತ್ರ (TC) ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ, ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರ ಕಚೇರಿಯಲ್ಲೇ ತನ್ನ ಕ್ಲಾಸ್ ಟೀಚರ್ ಎದೆಗೆ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿರುವ ‘ಲಿಟಲ್ ಫ್ಲವರ್ ಸ್ಕೂಲ್’ (Little Flower School) ನಲ್ಲಿ ಈ ಭೀಕರ ಕೃತ್ಯ ನಡೆದಿದೆ. ಈ ಘಟನೆಯ ಇಡೀ ರಕ್ತಸಿಕ್ತ ದೃಶ್ಯವು ಶಾಲೆಯ ಪ್ರಾಂಶುಪಾಲರ (Principal) ಕೊಠಡಿಯಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ಫೂಟೇಜ್ ಪ್ರಕಾರ, ವಿದ್ಯಾರ್ಥಿ, ಶಿಕ್ಷಕ ಮತ್ತು ಶಾಲೆಯ ಪ್ರಾಂಶುಪಾಲರು ಕಚೇರಿಯೊಳಗೆ ಕುಳಿತು ಟಿಸಿ ವಿಚಾರವಾಗಿ ಗಂಭೀರ ಚರ್ಚೆ ನಡೆಸುತ್ತಿರುವುದು ಕಂಡುಬರುತ್ತದೆ. ಮಾತು ಮುಂದುವರಿದಂತೆ ಕೆಲವೇ ಕ್ಷಣಗಳಲ್ಲಿ ವಿದ್ಯಾರ್ಥಿಯು ತೀವ್ರ ಆಕ್ರೋಶಗೊಂಡು ಶಿಕ್ಷಕನಿಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಇದರಿಂದ ಗಾಬರಿಗೊಂಡ ಮೂವರೂ ಸೀಟಿನಿಂದ ಎದ್ದು ನಿಂತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:
A teacher was injured after a minor student allegedly attacked him with a knife inside Little Flower School in the Cantonment area of Chhatrapati Sambhajinagar. pic.twitter.com/lExVMw2dvE
— GARIMA SINGH (@azad_garima) June 30, 2026
ಅಷ್ಟರಲ್ಲೇ ವಿದ್ಯಾರ್ಥಿಯು ತನ್ನ ಜೇಬಿನಿಂದ ಹರಿತವಾದ ಚಾಕುವನ್ನು ಹೊರತೆಗೆದು, ಕ್ಷಣಾರ್ಧದಲ್ಲಿ ಶಿಕ್ಷಕನ ಎದೆಗೆ ಬಲವಾಗಿ ಇರಿದಿದ್ದಾನೆ. ಇರಿತಕ್ಕೊಳಗಾದ ಶಿಕ್ಷಕ ತೀವ್ರ ನೋವಿನಿಂದ ಹಿಂದಕ್ಕೆ ಸರಿದಿದ್ದು, ಇಡೀ ಕಚೇರಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಲ್ಲೆಯ ನಂತರವೂ ವಿದ್ಯಾರ್ಥಿ ಜೋರಾಗಿ ಕಿರುಚಾಡುತ್ತಿದ್ದು, ತಕ್ಷಣವೇ ಒಳಗೆ ಓಡಿಬಂದ ಶಾಲೆಯ ಇತರ ಸಿಬ್ಬಂದಿ ಆತನನ್ನು ಹಿಡಿದು ನಿಯಂತ್ರಿಸಿದ್ದಾರೆ. ಚಾಕು ಇರಿತದಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಶಿಕ್ಷಕನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ
ಹಳೆಯ ದ್ವೇಷವೇ ಕಾರಣ?:
ಪೊಲೀಸ್ ಮೂಲಗಳ ಪ್ರಕಾರ, ವಿದ್ಯಾರ್ಥಿಯು ತನ್ನ ವರ್ಗಾವಣೆ ಪತ್ರ (TC) ಪಡೆದುಕೊಳ್ಳಲು ಶಾಲೆಗೆ ಬಂದಿದ್ದನು. ಈ ಪ್ರಕ್ರಿಯೆಯ ನಡುವೆ ಆತನಿಗೆ ಮತ್ತು ತರಗತಿ ಶಿಕ್ಷಕನಿಗೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಆರೋಪಿ ವಿದ್ಯಾರ್ಥಿಯು ಇದೇ ಶಾಲೆಯಲ್ಲಿ ಓದುತ್ತಿದ್ದಾಗಲೂ ಸಹ ಇದೇ ಕ್ಲಾಸ್ ಟೀಚರ್ ಜೊತೆ ಈ ಹಿಂದೆ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದನು ಎನ್ನಲಾಗಿದ್ದು, ಅದೇ ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಪ್ಲಾನ್ ಮುಖಾಂತರ ದಾಳಿ ನಡೆಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

