ಬಾಗಲಕೋಟೆ : ರಾಜ್ಯದಲ್ಲಿ ಕಂದಮ್ಮಗಳು ಹಾಗೂ ಅಪ್ರಾಪ್ತ ಮಕ್ಕಳ ಮೇಲೆ ನಡೆದಿರುವ ಎರಡು ಪ್ರತ್ಯೇಕ ಭೀಕರ ದೌರ್ಜನ್ಯದ ಘಟನೆಗಳು ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಡೇ ಕೇರ್ ಸೆಂಟರ್‌ನಲ್ಲಿ ಪುಟಾಣಿ ಮಕ್ಕಳಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದ್ದರೆ, ಇತ್ತ ಬಾಗಲಕೋಟೆಯಲ್ಲಿ ಕ್ರಿಕೆಟ್ ಬಾಲ್ ತಗುಲಿದ್ದಕ್ಕೆ ಶಾಲಾ ಕಿಟಕಿಗೆ ಕಟ್ಟಿಹಾಕಿ ಮಕ್ಕಳಿಗೆ ಚಪ್ಪಲಿಯಿಂದ ಥಳಿಸಲಾಗಿದೆ.
ಬೆಂಗಳೂರಿನ ಹೆಚ್‌ಎಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯ ‘ಸೊಸೈಟಿ ಜನರಲ್ ಬೇಬಿ ಡೇ ಕೇರ್ ಸೆಂಟರ್’ನಲ್ಲಿ (Society General Baby Daycare Centre) ಅಂಬೆಗಾಲಿಡುವ ಕಂದಮ್ಮಗಳ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಆರೋಪದ ಮೇಲೆ ಐವರು ಮಹಿಳಾ ಪಾಲಕರ (Caregivers) ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಮಕ್ಕಳ ಸಹಾಯವಾಣಿ (Child Helpline) ಮೂಲಕ ಬಂದ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಕೇವಲ 2 ರಿಂದ 3 ವರ್ಷ ಪ್ರಾಯದ ಪುಟಾಣಿ ಮಕ್ಕಳನ್ನು ಆರೋಪಿಗಳು ತೀವ್ರವಾಗಿ ಬೆದರಿಸುತ್ತಿದ್ದರು. ಮಕ್ಕಳು ಜೋರಾಗಿ ಅಳುತ್ತಿರುವಾಗ ಅವರನ್ನು ಬಲವಂತವಾಗಿ ಬಟ್ಟೆ ತುಂಬಿದ ವಾಷಿಂಗ್ ಮಷಿನ್ ಒಳಗಡೆ ಕೂರಿಸಿ ಹಿಂಸಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ವೆಸ್ಟರ್ನ್ ಶೌಚಾಲಯದ ಮೇಲೆ ಕೂರಿಸಿ, ಟಾಯ್ಲೆಟ್ ಜೂಟರ್ (Jet) ಮೂಲಕ ಮಕ್ಕಳ ಬಾಯಿಗೆ ಬಲವಂತವಾಗಿ ನೀರು ಸ್ಪ್ರೇ ಮಾಡಲಾಗುತ್ತಿತ್ತು. ಮಕ್ಕಳನ್ನು ಬಾತ್‌ರೂಮ್‌ನೊಳಗೆ ಲಾಕ್ ಮಾಡಿ, ಈ ವಿಷಯವನ್ನು ಪೋಷಕರಿಗೆ ಹೇಳದಂತೆ ಪ್ರಾಣ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಈ ಭೀಕರ ದೃಶ್ಯಗಳ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಮತ್ತೊಂದು ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನರೇನೂರು ಎಲ್‌ಟಿ-೦೧ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಜೂನ್ 21 ರಂದು ಶಾಲಾ ರಜಾದಿನವಾಗಿದ್ದರಿಂದ ಮಕ್ಕಳು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಕ್ರಿಕೆಟ್ ಬಾಲ್ ಪಕ್ಕದ ಮನೆಯ ಮಹಿಳೆಗೆ ತಗುಲಿದೆ.
ಇದನ್ನೂ ಓದಿ; ಕರಾವಳಿಯಲ್ಲಿ ವರುಣನ ಆರ್ಭಟ; ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ
ಇದರಿಂದ ತೀವ್ರ ಆಕ್ರೋಶಗೊಂಡ ಮಹಿಳೆ, ಮಕ್ಕಳನ್ನು ಮನಸೋಇಚ್ಛೆ ನಿಂದಿಸಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಬೇರೆಯವರನ್ನು ಪ್ರಚೋದಿಸಿ ಆಟವಾಡುತ್ತಿದ್ದ ಪ್ರಜ್ವಲ್ ಮತ್ತು ಸುಶಾಂತ್ ಎಂಬ ಇಬ್ಬರು ಅಪ್ರಾಪ್ತ ಬಾಲಕರನ್ನು ಹಿಡಿದು ಶಾಲಾ ಕಿಟಿಕಿಯ ಕಬ್ಬಿಣದ ಗ್ರಿಲ್‌ಗೆ ಹಗ್ಗದಿಂದ ಕಟ್ಟಿಹಾಕಿದ್ದಾಳೆ. ತದನಂತರ ಆರೋಪಿಗಳು ಆ ಇಬ್ಬರೂ ಮಕ್ಕಳಿಗೆ ಕೈಯಿಂದ ಹಾಗೂ ಚಪ್ಪಲಿಗಳಿಂದ ಕ್ರೂರವಾಗಿ ಥಳಿಸಿದ್ದಾರೆ. ಕೊನೆಗೆ ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿ ಮಕ್ಕಳನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾದಾಮಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

