ಸುಳ್ಯ: ಇಂದು ಬೆಳಗ್ಗೆ ‘ಸೇತು ಬಂಧು’ ಹಾಗೂ ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ (Bridgeman of India) ಎಂದೇ ಪ್ರಸಿದ್ಧ ಪಡೆದಿರುವ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (75) ಅವರು ನಿಧನ ಹೊಂದಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಅಸ್ಪತ್ರೆಗೆ ದಾಖಲಾಗಿದರು. ಇಂದು ಮುಂಜಾನೆ ಅವರು ವಿಧಿವಶರಾಗಿದ್ದಾರೆ.
ಭಾರತದ ಗ್ರಾಮೀಣ ಭಾಗಗಳಲ್ಲಿ ಸಂಪರ್ಕ ಕ್ರಾಂತಿ ಉಂಟುಮಾಡಿ, ನೂರಾರು ಹಳ್ಳಿಗಳ ಜನರ ಬಾಳಿಗೆ ಬೆಳಕಾದವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಖ್ಯಾತ ಸಾಮಾಜಿಕ ಕಾರ್ಯಕರ್ತ ಹಾಗೂ ಎಂಜಿನಿಯರ್ ಗಿರೀಶ್ ಭಾರದ್ವಾಜ್.

ದೇಶಾದ್ಯಂತ ದುರ್ಗಮ ಹಳ್ಳಿಗಳಿಗೆ ಸುಲಭವಾಗಿ ತೂಗುಸೇತುವೆಗಳನ್ನು ನಿರ್ಮಿಸಿಕೊಟ್ಟ ಇವರ ಸಾಧನೆಯನ್ನು ಗುರುತಿಸಿ ಜನ ಇವರನ್ನು ಗೌರವದಿಂದ ‘ಸೇತು ಬಂಧು’ ಹಾಗೂ ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ (Bridgeman of India) ಎಂದೇ ಕರೆಯುತ್ತಾರೆ.
127 ಕ್ಕೂ ಹೆಚ್ಚು ಸೇತುವೆಗಳ ನಿರ್ಮಾಣ:
1950 ಮೇ 2 ರಂದು ಜನಿಸಿದ ಗಿರೀಶ್ ಭಾರದ್ವಾಜ್ ಅವರು ಸಾರ್ವಜನಿಕರಿಗೆ ನೆರವಾಗಲು ಆರಂಭಿಸಿದ ಸೇತುವೆ ನಿರ್ಮಾಣ ಕಾರ್ಯ ಇಂದು ದೇಶದ ಇತಿಹಾಸದಲ್ಲೇ ದಾಖಲಾಗಿದೆ. ನದಿ, ಹಳ್ಳ-ಕೊಳ್ಳಗಳಿಂದಾಗಿ ಮುಖ್ಯವಾಹಿನಿಯಿಂದ ಸಂಪೂರ್ಣ ಕತ್ತರಿಸಲ್ಪಟ್ಟಿದ್ದ ಹಳ್ಳಿಗಳಿಗೆ ಇವರು ಆಶಾಕಿರಣವಾದರು.
ಇದುವರೆಗೆ ದೇಶದ ವಿವಿಧೆಡೆ ಸುಮಾರು 127 ಕ್ಕೂ ಹೆಚ್ಚು ಪರಿಸರಸ್ನೇಹಿ ಮತ್ತು ಗಟ್ಟಿಮುಟ್ಟಾದ ತೂಗುಸೇತುವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಹಳ್ಳಿಗಳಿಗೂ ಇವರ ಸೇತುವೆಗಳು ಸಂಪರ್ಕ ಕಲ್ಪಿಸಿವೆ.
ಇದನ್ನೂ ಓದಿ: ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಇನ್ನಿಲ್ಲ!: 49ನೇ ವಯಸ್ಸಿನಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್ ನಿಧನ
ಮೊದಲ ಸೇತುವೆ ಮತ್ತು ಪದ್ಮಶ್ರೀ ಪುರಸ್ಕಾರ:
ಮೆಕಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ಇವರು, ತಮ್ಮ ಮೊದಲ ತೂಗುಸೇತುವೆಯನ್ನು 1989ರಲ್ಲಿ ದಕ್ಷಿಣ ಕರ್ನಾಟಕದ ಪಯಸ್ವಿನಿ ನದಿಗೆ ಅಡ್ಡಲಾಗಿ ‘ಅರಂಬೂರು’ ಎಂಬಲ್ಲಿ ನಿರ್ಮಿಸಿದರು. ಅಂದಿನಿಂದ ಆರಂಭವಾದ ಇವರ ಯಜ್ಞ ನಿರಂತರವಾಗಿ ಸಾಗಿತು.
ಯಾವುದೇ ಸರ್ಕಾರಿ ಭಾರಿ ಅನುದಾನಗಳಿಲ್ಲದೆ, ಸ್ಥಳೀಯರ ಸಹಭಾಗಿತ್ವದಲ್ಲಿ ಇಷ್ಟೊಂದು ಬೃಹತ್ ಸಾಧನೆ ಮಾಡಿದ ಇವರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು 2017 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ (Padma Shri) ನೀಡಿ ಗೌರವಿಸಿದೆ. ಇಂದಿಗೂ ಇವರ ತಾಂತ್ರಿಕ ಜ್ಞಾನ ಮತ್ತು ಸಾಮಾಜಿಕ ಕಳಕಳಿ ಯುವ ಪೀಳಿಗೆಗೆ ದೊಡ್ಡ ಪ್ರೇರಣೆಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

