ಪುತ್ತೂರು: “ವ್ಯಾಸ ಪೂರ್ಣಿಮೆಯು ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ದೀಪ ಬೆಳಗಿಸಿದ ಮಹರ್ಷಿ ವ್ಯಾಸರನ್ನು ಸ್ಮರಿಸುವ ಅತ್ಯಂತ ಶ್ರೇಷ್ಠ ದಿನವಾಗಿದೆ. ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕೇವಲ ಶೈಕ್ಷಣಿಕ ಶಿಕ್ಷಣವಷ್ಟೇ ಅಲ್ಲದೆ ಸಂಸ್ಕಾರವೂ ಅಗತ್ಯವಾಗಿದ್ದು, ಪ್ರತಿಯೊಬ್ಬರ ಜೀವನದಲ್ಲೂ ಗುರುವಿನ ಸ್ಥಾನ ಅತ್ಯುನ್ನತವಾಗಿದೆ,” ಎಂದು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಹೇಳಿದರು.
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ವ್ಯಾಸ ಪೂರ್ಣಿಮಾ’ (ಗುರುಪೂರ್ಣಿಮಾ) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರು ಮಾತನಾಡುತ್ತಾ, ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಶ್ರೇಷ್ಠ ಗುರುವಿನ ಮಾರ್ಗದರ್ಶನವಿರುತ್ತದೆ ಎಂಬುದನ್ನು ಸುಂದರ ಉದಾಹರಣೆಗಳ ಮೂಲಕ ವಿವರಿಸಿದರು. ಸಮರ್ಥ ರಾಮದಾಸರ ರಾಜಕೀಯ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನದಿಂದ ರಾಜ್ಯಭಾರ ನಡೆಸಿದರು.
ಹರಿಹರ ಮತ್ತು ಬುಕ್ಕರಾಯರಿಗೆ ವಿದ್ಯಾರಣ್ಯ ಸ್ವಾಮಿಗಳು ಮಾರ್ಗದರ್ಶನ ನೀಡಿ ಸಾಮ್ರಾಜ್ಯ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದರು. ಶ್ರೀರಾಮಕೃಷ್ಣ ಪರಮಹಂಸರು ವಿವೇಕಾನಂದರ ಸಂಶಯಗಳನ್ನು ನಿವಾರಿಸಿ ಅವರನ್ನು ವಿಶ್ವಪ್ರಸಿದ್ಧ ಆಧ್ಯಾತ್ಮಿಕ ನಾಯಕನನ್ನಾಗಿ ರೂಪಿಸಿದರು.
ಗುರುಪರಂಪರೆಯನ್ನು ಗೌರವಿಸಿ, ಸನಾತನ ಸಂಸ್ಕೃತಿಯನ್ನು ಬೆಳೆಸುತ್ತಾ ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕ ಸಂಸ್ಕಾರಗಳನ್ನು ಅಳವಡಿಸಿಕೊಂಡು ಗುಣ ಹಾಗೂ ವಿನಯದಿಂದ ಕೂಡಿದ ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ಮುಖ್ಯ ಅತಿಥಿ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಅವರ ಪಾದಪೂಜೆ ನೆರವೇರಿಸಿ ಭಾವಪೂರ್ಣ ಗುರುವಂದನೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಮಾತನಾಡಿ, “ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ‘ಆಚಾರ್ಯ ದೇವೋ ಭವ’ ಎಂದು ದೇವರ ಸ್ಥಾನ ನೀಡಲಾಗಿದೆ. ಗುರುಭಕ್ತಿ, ನಿಷ್ಠೆ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ಸಂಪಾದಿಸಿದಾಗ ಖಂಡಿತ ಯಶಸ್ಸು ಸಾಧಿಸಲು ಸಾಧ್ಯ,” ಎಂದರು.
ಇದನ್ನೂ ಓದಿ: NEET UG 2026: ಕಲ್ಲಡ್ಕ ಶ್ರೀರಾಮ ಪ.ಪೂ. ವಿದ್ಯಾಲಯದ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅದ್ವಿತೀಯ ಸಾಧನೆ
ಪ್ರಾಂಶುಪಾಲೆ ಮಾಲತಿ ಡಿ ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ದ್ಯಾರ್ಥಿಗಳು ಭಕ್ತಿಯಿಂದ ಗುರುಸ್ತುತಿ ಹಾಡಿದರು. ಕೆ. ಎಮ್. ಶಮಿತ ಭಟ್ ಗುರುವಿನ ಮಹತ್ವದ ಕುರಿತು ಮಾತನಾಡಿದರು. ಸುಧನ್ವ ಕೆ. ಗುರುಪೂರ್ಣಿಮೆಯ ಪ್ರಸ್ತಾವನೆಗೈದರು. ಶಿಕ್ಷಕಿ ಪ್ರಿಯಶ್ರೀ ಅತಿಥಿಗಳನ್ನು ಪರಿಚಯಿಸಿದರು, ಅನನ್ಯಾ ಬಿ. ಸ್ವಾಗತಿಸಿ, ಲಾವಣ್ಯ ಪಟ್ಟೆ ಧನ್ಯವಾದ ಸಮರ್ಪಿಸಿದರು. ಮನಸ್ವಿ ಎಮ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಮಹರ್ಷಿ ವೇದವ್ಯಾಸರ ಭಾವಚಿತ್ರಕ್ಕೆ ಮಂಗಲಾರತಿ ಬೆಳಗಿ ಗೌರವ ಸಮರ್ಪಿಸಲಾಯಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

