ಮೈಸೂರಿನಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿ ಕನ್ನಡಿಗರ ಮನ ಗೆದ್ದ ಪ್ರಧಾನಿ ಮೋದಿ

ಮೈಸೂರು: “ಎಲ್ಲರಿಗೂ ನನ್ನ ನಮಸ್ಕಾರಗಳು, ತಾಯಿ ಚಾಮುಂಡೇಶ್ವರಿಗೆ ಪ್ರಣಾಮಗಳು” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡದಲ್ಲೇ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಸಭಾಂಗಣದಲ್ಲಿದ್ದ ಜನರಿಂದ ಭಾರೀ ಕರತಾಡನ ಹಾಗೂ ಹರ್ಷೋದ್ಗಾರ ಮುಗಿಲುಮುಟ್ಟಿತು.

ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ‘ವಿವೇಕ ಸ್ಮಾರಕ’ವನ್ನು ಲೋಕಾರ್ಪಣೆಗೊಳಿಸಿದ ಬಳಿಕ, ಶ್ರೀ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿ ಮಾತನಾಡಿದರು.

“ಮೈಸೂರು ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಜ್ಞೆಯ ದಿವ್ಯ ಕೇಂದ್ರವಾಗಿದೆ. ಭಾರತದ ಭವ್ಯ ಪರಂಪರೆಯು ಈ ನಗರದ ಪ್ರತಿಯೊಂದು ಮೂಲೆಯಲ್ಲೂ ಹಾಸುಹೊಕ್ಕಾಗಿದೆ. ಮೈಸೂರು ಕೇವಲ ತನ್ನ ಪರಂಪರೆ, ಅರಮನೆ, ದಸರಾ, ಸಂಗೀತ ಮತ್ತು ಸಾಹಿತ್ಯದಿಂದ ದೇಶದ ಗಮನ ಸೆಳೆದಿಲ್ಲ, ಬದಲಾಗಿ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ” ಎಂದು ಮೋದಿ ಬಣ್ಣಿಸಿದರು.

ಇದನ್ನೂ ಓದಿ:ಕುಟ್ಟಿಪ್ಪುರಂ ಬಳಿ ಖಾಸಗಿ ಬಸ್ ಪಲ್ಟಿ: ಒಬ್ಬ ಸಾವು, 26 ಮಂದಿಗೆ ಗಂಭೀರ ಗಾಯ

“ಎರಡು ದಿನಗಳ ಹಿಂದಷ್ಟೇ ನಾವು ಗುರು ಪೂರ್ಣಿಮೆಯನ್ನು ಆಚರಿಸಿದ್ದೇವೆ. ನನ್ನ ಸ್ವಂತ ಜೀವನದ ಸುದೀರ್ಘ ಆಧ್ಯಾತ್ಮಿಕ ಯಾತ್ರೆಯಲ್ಲಿ ಶ್ರೀ ರಾಮಕೃಷ್ಣ ಆಶ್ರಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮೈಸೂರಿನ ಪವಿತ್ರ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ” ಎಂದರು.

“ಭಾರತದ ಅರ್ಥವ್ಯವಸ್ಥೆಯು ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಅಗಾಧ ಬೆಳವಣಿಗೆಗೆ ನಮ್ಮ ಯುವಕರ ಸಾಮರ್ಥ್ಯವೇ ಪ್ರಮುಖ ಕಾರಣ. ಮೊಬೈಲ್ ಉತ್ಪಾದನೆ ಹಾಗೂ ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಎಲ್ಲಾ ಆಧುನಿಕ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿದೆ” ಎಂದರು.

“ಯುವಕರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿ ಬದಲಾಗಬೇಕಾದರೆ ಅವರಿಗೆ ಸರಿಯಾದ ಮಾರ್ಗದರ್ಶನ, ಸೂಕ್ತ ಅವಕಾಶಗಳು ಹಾಗೂ ಸ್ವಂತ ನೆಲದಲ್ಲಿ ದೊಡ್ಡ ಕನಸುಗಳನ್ನು ಕಾಣುವ ಆತ್ಮವಿಶ್ವಾಸ ಸಿಗಬೇಕು. ನಮ್ಮ ದೇಶದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಈ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವುದು ಸಂತಸದ ವಿಷಯ” ಎಂದು ಪ್ರಧಾನಿ ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *