Breaking News

ಕುತ್ತಿಗೆಯಲ್ಲಿ ಟ್ರಾಕ್ಟರ್ ಟೈರ್ ಸಿಲುಕಿಕೊಂಡು ಪರದಾಡುತ್ತಿರುವ ಒಂಟಿ ಆನೆ

ಗುವಾಹಟಿ: ಕುತ್ತಿಗೆಯ ಭಾಗದಲ್ಲಿ ದೊಡ್ಡ ಟ್ರಾಕ್ಟರ್ ಟೈರ್‌ವೊಂದು ಸಿಲುಕಿಕೊಂಡು ಆನೆಯೊಂದು ಚಹಾ ತೋಟ ಹಾಗೂ ಅರಣ್ಯ ಪ್ರದೇಶದಲ್ಲಿ ಅತ್ತಿತ್ತ ಅಲೆಯುತ್ತಿರುವ ವಿಚಿತ್ರ ಹಾಗೂ ಕರುಣಾಜನಕ ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ನುಮಾಲಿಗಢದ ಬೊಕಿಯಾಲ್‌ನಲ್ಲಿ ಬೆಳಕಿಗೆ ಬಂದಿದೆ.

ಅಸ್ಸಾಂನ ನುಮಾಲಿಗಢ ಸಮೀಪದ ಮೊರೊಂಗಿ ಅರಣ್ಯ ವಲಯದ ಚಹಾ ತೋಟದಲ್ಲಿ ಗುರುವಾರ ಆಹಾರ ಅರಸುತ್ತಾ ಬಂದಿದ್ದ ಒಂಟಿ ಆನೆಯ ಕುತ್ತಿಗೆಯಲ್ಲಿ ಟೈರ್ ಸಿಲುಕಿರುವುದನ್ನು ಕಂಡು ಸ್ಥಳೀಯ ನಿವಾಸಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಯಾರೋ ಕಾಡಿನಲ್ಲಿ ತೊರೆದು ಹೋಗಿದ್ದ ಹಳೆಯ ಟ್ರಾಕ್ಟರ್ ಟೈರ್ ಅನ್ನು ಆನೆಯು ತನ್ನ ಕುತೂಹಲದಿಂದ ಸೊಂಡಿಲಿನಿಂದ ಎತ್ತಿ ಆಟವಾಡಲು ಯತ್ನಿಸಿರಬಹುದು. ಈ ವೇಳೆ ಆಕಸ್ಮಿಕವಾಗಿ ಟೈರ್ ನುಸುಳಿ ಅದರ ಕುತ್ತಿಗೆಯ ಭಾಗಕ್ಕೆ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ದೃಶ್ಯ ಹಾಗೂ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆದಿವೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಖುಮ್ತಾಯ್ ಕ್ಷೇತ್ರದ ಶಾಸಕ ಮೃಣಾಲ್ ಸೈಕಿಯಾ ಅವರು ತಕ್ಷಣವೇ ಹಿರಿಯ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಪರಿಶೀಲನೆಗಾಗಿ ವಿಶೇಷ ಅರಣ್ಯ ಸಿಬ್ಬಂದಿಯ ತಂಡವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಶಾಸಕ ಮೃಣಾಲ್ ಸೈಕಿಯಾ ಅವರು ಸ್ಥಳೀಯರಲ್ಲಿ ಮನವಿ ಮಾಡುತ್ತಾ, “ಆನೆಯು ಈಗಾಗಲೇ ಕುತ್ತಿಗೆಯಲ್ಲಿ ಟೈರ್ ಸಿಲುಕಿ ತೀವ್ರ ಕಿರಿಕಿರಿ ಹಾಗೂ ಅಸ್ವಸ್ಥತೆಯಲ್ಲಿದೆ. ಸಾರ್ವಜನಿಕರು ಯಾರೂ ಆನೆಯ ಬಳಿ ಹೋಗಿ ಅದನ್ನು ರೇಗಿಸುವುದು ಅಥವಾ ತೊಂದರೆ ಕೊಡುವುದನ್ನು ಮಾಡಬಾರದು. ಶಾಂತತೆ ಕಾಪಾಡಿಕೊಳ್ಳಿ,” ಎಂದು ಕೋರಿದ್ದಾರೆ.

ಇದನ್ನೂ ಓದಿ: ನೇಪಾಳ ದುರಂತಕ್ಕೂ ಮುನ್ನ ಸಿಕ್ಕಿತ್ತಾ ದೈವಿಕ ಮುನ್ಸೂಚನೆ? ಪಲಾಂಚೋಕ್ ಭಗವತಿ ವಿಗ್ರಹ ಬೆವತ 2 ದಿನದಲ್ಲೇ ಪ್ರಳಯ

ಸದ್ಯ ಅರಣ್ಯ ಇಲಾಖೆಯ ತಂಡವು ಆನೆಯ ಚಲನವಲನಗಳ ಮೇಲೆ ಸತತ ನಿಗಾ ವಹಿಸಿದೆ. ಆನೆಯ ಆರೋಗ್ಯ ಹಾಗೂ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಆನೆಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಕುತ್ತಿಗೆಯಿಂದ ಟೈರ್ ಅನ್ನು ತೆರವುಗೊಳಿಸಲು ಸೂಕ್ತ ಕಾರ್ಯಾಚರಣೆ ರೂಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಈಗಾಗಲೇ ಮಾನವ-ಆನೆ ಸಂಘರ್ಷಗಳು ಹೆಚ್ಚಾಗಿರುವುದರಿಂದ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *