Breaking News

ಬಾಕಿ ‘ಇ-ಚಲನ್’ ಟ್ರಾಫಿಕ್ ದಂಡ ಕಟ್ಟುವುದು ಇನ್ಮುಂದೆ ಕಡ್ಡಾಯ: ದಂಡವನ್ನು ವಿದ್ಯುತ್ ಬಿಲ್ ಜೊತೆ ಲಿಂಕ್ ಮಾಡಲು ಸುಪ್ರೀಂ ಕೋರ್ಟ್ ಸೂಚನೆ

ದೆಹಲಿ : ಸಂಚಾರ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಸೋಮವಾರ ಬಿಗ್ ಶಾಕ್ ನೀಡಿದೆ. ಬಾಕಿ ಇರುವ ‘ಇ-ಚಲನ್’ (e-Challan) ದಂಡದ ಮೊತ್ತವನ್ನು ಕಡ್ಡಾಯವಾಗಿ ವಸೂಲಿ ಮಾಡಲು, ಅದನ್ನು ಸಾರ್ವಜನಿಕರ ವಿದ್ಯುತ್ ಬಿಲ್‌ಗಳೊಂದಿಗೆ (Electricity Bills) ಲಿಂಕ್ ಮಾಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. ಸಾಮಾಜಿಕ ಕಾರ್ಯಕರ್ತ ಎಸ್. ರಾಜಶೇಖರನ್ ಅವರು ರಸ್ತೆ ಸುರಕ್ಷತೆಯ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿ. ವಿಶ್ವನಾಥನ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಸಲಹೆಯನ್ನು ನೀಡಿದೆ.

ಬಾಕಿ ಇದೆ ಬರೋಬ್ಬರಿ ₹20,000 ಕೋಟಿ ದಂಡ:

ವಿಚಾರಣೆ ವೇಳೆ ಟ್ರಾಫಿಕ್ ದಂಡ ವಸೂಲಾತಿ ಕುರಿತು ಸುಪ್ರೀಂ ಕೋರ್ಟ್‌ಗೆ ಆಘಾತಕಾರಿ ಅಂಕಿ-ಅಂಶಗಳನ್ನು ನೀಡಲಾಯಿತು. ದೇಶಾದ್ಯಂತ ಇ-ಚಲನ್‌ಗಳ ಮೂಲಕ ಒಟ್ಟು 45,000 ಕೋಟಿ ರೂಪಾಯಿಗಳಷ್ಟು ದಂಡದ ಮೊತ್ತ ವಸೂಲಾಗಬೇಕಿತ್ತು. ಆದರೆ, ಈವರೆಗೆ ಕೇವಲ 25,000 ಕೋಟಿ ರೂಪಾಯಿಗಳನ್ನು ಮಾತ್ರ ವಸೂಲಿ ಮಾಡಲು ಸಾಧ್ಯವಾಗಿದೆ. ಇನ್ನು ಬರೋಬ್ಬರಿ 20,000 ಕೋಟಿ ರೂಪಾಯಿಗಳಿಗೂ ಅಧಿಕ ಟ್ರಾಫಿಕ್ ದಂಡವು ಸಾರ್ವಜನಿಕರಿಂದ ಪಾವತಿಯಾಗದೆ ಬಾಕಿ ಉಳಿದಿದೆ.

ಇದನ್ನೂ ಓದಿ; ಬಂಟ್ವಾಳದಲ್ಲಿ “ಬಿ.ಸಿ. ರೋಡ್ ಚಲೋ” ಪ್ರತಿಭಟನೆ: ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯಿದೆ ಖಂಡಿಸಿ ವಿಎಚ್‌ಪಿ-ಭಜರಂಗದಳ ಆಕ್ರೋಶ

ಕೇವಲ ಎಲೆಕ್ಟ್ರಾನಿಕ್ ಸಿಸಿಟಿವಿಗಳ ಮೂಲಕ ಇ-ಚಲನ್ ಕಳುಹಿಸಿದರೆ ಸಾಲದು, ಆ ಹಣವನ್ನು ವಸೂಲಿ ಮಾಡುವುದೇ ದೊಡ್ಡ ಸವಾಲಾಗಿದೆ ಎಂದು ಪೀಠ ಕಳವಳ ವ್ಯಕ್ತಪಡಿಸಿತು. ಟ್ರಾಫಿಕ್ ಚಲನ್ ಬಾಕಿ ಇರುವ ವಾಹನ ಮಾಲೀಕರ ವಿದ್ಯುತ್ ಸರಬರಾಜು ಬಿಲ್‌ಗೆ ದಂಡದ ಮೊತ್ತವನ್ನು ಸೇರಿಸುವ ವ್ಯವಸ್ಥೆ ಜಾರಿಗೆ ತಂದರೆ, ಪ್ರತಿಯೊಬ್ಬರೂ ದಂಡ ಪಾವತಿಸಲೇಬೇಕಾಗುತ್ತದೆ. ದಂಡ ಪಾವತಿಸದಿದ್ದಲ್ಲಿ ವಾಹನಗಳ ಎಫ್‌ಸಿ (Fitness Certificate) ನವೀಕರಣ, ಇನ್ಶೂರೆನ್ಸ್ ಹಾಗೂ ವಾಹನ ಮಾರಾಟ/ವರ್ಗಾವಣೆಗೆ ತಡೆ ನೀಡುವ ಪ್ರಕ್ರಿಯೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ರಸ್ತೆ ಸುರಕ್ಷತೆಯನ್ನು ಕಾಪಾಡಲು ಮತ್ತು ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಗೌರವಿಸುವಂತೆ ಮಾಡಲು ಈ ರೀತಿಯ ಕಟ್ಟುನಿಟ್ಟಿನ ಕ್ರಮಗಳು ಅತ್ಯಗತ್ಯ ಎಂದು ಪೀಠ ಪ್ರತಿಪಾದಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ