ಬೆಂಗಳೂರು: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯ ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪಂದ್ಯ ಆರಂಭವಾಗುವುದು ಅನುಮಾನಕ್ಕೆ ಕಾರಣವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದು 2-2 ಸಮಬಲ ಸಾಧಿಸಿರುವುದರಿಂದ, ಈ ಪಂದ್ಯದಲ್ಲಿ ಗೆದ್ದ ತಂಡವೇ ಸರಣಿ ಎತ್ತಿಹಿಡಿಯಲಿದೆ. ಆದರೆ, ಬೆಂಗಳೂರಿನಲ್ಲಿ ಮಳೆ ಮುಂದುವರಿದಿರುವ ಕಾರಣ ಪಂದ್ಯದ ಟಾಸ್ ವಿಳಂಬವಾಗಿದೆ.
ಪಂದ್ಯ ಸಂಜೆ 7:30ಕ್ಕೆ ಆರಂಭವಾಗಬೇಕಿತ್ತು. ಆದರೆ ಸಂಜೆ 5 ಗಂಟೆಗೂ ಮುನ್ನವೇ ನಗರದಲ್ಲಿ ಮಳೆ ಆರಂಭವಾಗಿದ್ದು, ಪಂದ್ಯದ ವೇಳೆ ಹಾಗೂ ರಾತ್ರಿಯೂ ಬಲವಾದ ಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಅಕ್ಯೂವೆದರ್ ಹಾಗೂ ಹವಾಮಾನ ಇಲಾಖೆ ವರದಿ ಮಾಡಿವೆ. ಬಹಳ ದಿನಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಹರಿದುಬಂದಿದ್ದಾರೆ. ಆದರೆ ವರುಣನ ಎಂಟ್ರಿ ಅಭಿಮಾನಿಗಳಲ್ಲಿ ಆತಂಕ ತಂದೊಡ್ಡಿದೆ.
ಇದನ್ನೂ ಓದಿ ಟೀಮ್ ಇಂಡಿಯಾ ಮಹಿಳಾ ಕ್ರಿಕೆಟ್ಗೆ ಹೊಸ ನಾಯಕಿ!: ಹರ್ಮನ್ಪ್ರೀತ್ ಕೌರ್ ರಾಜೀನಾಮೆ, ಸ್ಮೃತಿ ಮಂಧನ ಕ್ಯಾಪ್ಟನ್
ಅಭಿಮಾನಿಗಳು ಹಾಗೂ ಉಭಯ ತಂಡಗಳಿಗೆ ಒಂದು ಸಮಾಧಾನಕರ ವಿಷಯವೆಂದರೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ‘ಸಬ್-ಏರ್’ (Sub-Air) ಒಳಚರಂಡಿ ತಂತ್ರಜ್ಞಾನವಿದೆ. ಎಷ್ಟೇ ಧಾರಾಕಾರ ಮಳೆ ಸುರಿದು ಮೈದಾನ ಜಲಾವೃತಗೊಂಡರೂ, ಮಳೆ ನಿಂತ ಕೇವಲ 15 ರಿಂದ 30 ನಿಮಿಷಗಳಲ್ಲೇ ಮೈದಾನವನ್ನು ಸಂಪೂರ್ಣವಾಗಿ ಒಣಗಿಸಿ ಪಂದ್ಯವನ್ನು ಪುನರಾರಂಭಿಸಬಹುದು. ಹೀಗಾಗಿ ಪಂದ್ಯ ಆರಂಭವಾಗಲು ಮಳೆರಾಯ ವಿರಾಮ ನೀಡಬೇಕಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

