ದಸರಾದಲ್ಲಿ ಆನೆ ರೊಚ್ಚಿಗೆದ್ದಿದ್ದೇಕೆ?: ಅಂಬಾರಿ ಹೊತ್ತು ಅಡ್ಡಾದಿಡ್ಡಿ ಓಡಿದ ಸೋಮಣ್ಣ

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ನವರಾತ್ರಿ ನಾಡಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ದಸರಾ ಜಂಬೂಸವಾರಿ ವೇಳೆ ಆನೆ ರೊಚ್ಚಿಗೆದ್ದು ದಿಕ್ಕಾಪಾಲಾಗಿ ಓಡಿದ ಘಟನೆಗೆ ತರಬೇತಿ ಹಾಗೂ ತಾಲೀಮಿನ ಅಭಾವವೇ ಪ್ರಮುಖ ಕಾರಣ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ನಗರದ ಐತಿಹಾಸಿಕ ಶಿವಪ್ಪನಾಯಕ ಅರಮನೆಯಿಂದ ಶೋಭಾಯಾತ್ರೆ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ 450 ಕೆಜಿ ತೂಕದ ಬೆಳ್ಳಿ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆಯು ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಿ ಭಾರೀ ಆತಂಕ ಸೃಷ್ಟಿಸಿದೆ.

ಕೊನೆ ಕ್ಷಣದ ನಿರ್ಧಾರ ಹಾಗೂ ತಾಲೀಮಿನ ಅಭಾವ:

ಮೂಲಗಳ ಪ್ರಕಾರ, ಶಿವಮೊಗ್ಗ ದಸರಾದಲ್ಲಿ 450 ಕೆಜಿ ತೂಕದ ಭವ್ಯ ಬೆಳ್ಳಿ ಅಂಬಾರಿಯನ್ನು ಹೊರಲು ಮೊದಲಿಗೆ ‘ಸಾಗರ್’ ಆನೆಗೆ ಸುದೀರ್ಘ  ತರಬೇತಿ ನೀಡಲಾಗಿತ್ತು. ಆದರೆ ಜಂಬೂಸವಾರಿಯ ಕೊನೆಯ ಕ್ಷಣದಲ್ಲಿ ಸಾಗರ್ ಆನೆಗೆ ತೀವ್ರ ಕಾಲುನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅನಿವಾರ್ಯವಾಗಿ ಸೋಮಣ್ಣ ಆನೆಗೆ ಮೊದಲ ಬಾರಿಗೆ ಬೆಳ್ಳಿ ಅಂಬಾರಿಯನ್ನು ಹೊರಿಸಲು ನಿರ್ಧರಿಸಲಾಯಿತು. ಮೊದಲ ಬಾರಿಗೆ ಬೃಹತ್ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಸೋಮಣ್ಣ ಆನೆಗೆ ಪೂರ್ವಭಾವಿಯಾಗಿ ಸೂಕ್ತ ತಾಲೀಮು ಹಾಗೂ ತರಬೇತಿ ಲಭಿಸಿರಲಿಲ್ಲ. ಇದರಿಂದಾಗಿ ಮೆರವಣಿಗೆಯ ಹಾದಿಯಲ್ಲಿ ಜಿನುಗಿದ ಶಬ್ದ ಹಾಗೂ ಜನಸ್ತೋಮಕ್ಕೆ ಬೆದರಿದ ಆನೆಯು ಹಠಾತ್ತನೆ ನಿಯಂತ್ರಣ ತಪ್ಪಿ ಭೀತಿ ಹುಟ್ಟಿಸುವ ರೀತಿಯಲ್ಲಿ ಪ್ರಮುಖ ರಸ್ತೆಗಳಲ್ಲಿ ಓಡಿದೆ.

ಇದನ್ನೂ ಓದಿ: ಮೈಸೂರು ದಸರಾ 2026: ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಹೊತ್ತ ದುಬಾರೆಯ ‘ಪ್ರಶಾಂತ’

ಕಾರುಗಳು ಜಖಂ, ಅಂಬಾರಿಗೆ ಹಾನಿ ಹಾಗೂ ಸಾರ್ವಜನಿಕರ ಕಾಲ್ತುಳಿತ ಭೀತಿ:

ಕೋಟೆ ರಸ್ತೆಯಲ್ಲಿ ಆನೆ ಅಡ್ಡಾದಿಡ್ಡಿಯಾಗಿ ಸಾಗಿದ ಪರಿಣಾಮ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ತೀವ್ರವಾಗಿ ಜಖಂಗೊಂಡಿವೆ.  ಆನೆ ದಿಕ್ಕಾಪಾಲಾಗಿ ಓಡಿದ ರಭಸಕ್ಕೆ ಅದರ ಬೆನ್ನ ಮೇಲಿದ್ದ 450 ಕೆಜಿ ತೂಕದ ಬೆಳ್ಳಿ ಅಂಬಾರಿಯು ಜಾರಿ ಕೆಳಗೆ ಬಿದ್ದು, ಸಣ್ಣ ಪ್ರಮಾಣದ ಹಾನಿಗೊಳಗಾಗಿದೆ. ಗಜರಾಜನ ಹಠಾತ್ ಆರ್ಭಟ ಹಾಗೂ ರೊಚ್ಚಿಗೆದ್ದ ನಡವಳಿಕೆಯಿಂದ ಕಂಗಾಲಾದ ಸಾರ್ವಜನಿಕರು ಹಾಗೂ ಮಕ್ಕಳು ಜೀವಭಯದಿಂದ ದಿಕ್ಕಾಪಾಲಾಗಿ ಓಟ ಕಿತ್ತಿದ್ದಾರೆ. ಘಟನೆಯಿಂದಾಗಿ ಶಿವಮೊಗ್ಗ ನಗರದ ಹೃದಯಭಾಗದಲ್ಲಿ ಕೆಲಕಾಲ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ನಮ್ಮ ಪ್ರತಿನಿಧಿಯ ವರದಿಯಂತೆ, ತಕ್ಷಣವೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾವುತರು ಸೋಮಣ್ಣ ಆನೆಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ