ವೃದ್ಧೆ ವಿತ್‌ಡ್ರಾ ಫಾರ್ಮ್‌ನಲ್ಲಿ 2,100 ಬರೆದು 2,000 ರೂ. ನೀಡಿದ ಬ್ಯಾಂಕ್ ಉದ್ಯೋಗಿ; ವಿಡಿಯೋ ವೈರಲ್

ಫತೇಪುರ್: ಬ್ಯಾಂಕ್ ಉದ್ಯೋಗಿಗಳ ಮೇಲೆ ಅಪಾರ ನಂಬಿಕೆ ಇಟ್ಟು ಹಣವಿಡುವ ಹಿರಿಯ ನಾಗರಿಕರು ಹಾಗೂ ಅನಕ್ಷರಸ್ಥ ಗ್ರಾಹಕರ ನಂಬಿಕೆಗೆ ದ್ರೋಹ ಬಗೆಯಲಾಗುತ್ತಿದೆಯೇ ಎನ್ನುವ ಗಂಭೀರ ಪ್ರಶ್ನೆಯೊಂದು ಉತ್ತರ ಪ್ರದೇಶದ ಫತೇಪುರ್‌ನಲ್ಲಿ ಬೆಳಕಿಗೆ ಬಂದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮಿನಿ ಶಾಖೆಯೊಂದರಲ್ಲಿ ವೃದ್ಧೆಯೊಬ್ಬರ ವಿತ್‌ಡ್ರಾ ಫಾರ್ಮ್‌ನಲ್ಲಿ ₹2,100 ಎಂದು ಬರೆದು ಕೇವಲ ₹2,000 ನೀಡಿ ವಂಚಿಸಲು ಯತ್ನಿಸಿದ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೃದ್ಧೆಯ ಮಗ ಸ್ಥಳದಲ್ಲೇ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ವಿಡಿಯೋ ರೆಕಾರ್ಡ್ ಮಾಡಿ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ಪ್ರಸ್ತುತ ವೈರಲ್ ಆಗಿದೆ.

ಘಟನೆಯ ಹಿನ್ನೆಲೆ ಹಾಗೂ ಬಯಲಾದ ಅಕ್ರಮ:

 ಹಿರಿಯ ತಾಯಿ ಬ್ಯಾಂಕ್‌ನಿಂದ ಹಣ ಹಿಂಪಡೆದು ಬಂದ ನಂತರ, ಅನುಮಾನಗೊಂಡ ಆಕೆಯ ಮಗ ಬ್ಯಾಂಕ್ ಮಿನಿ ಬ್ರಾಂಚ್‌ಗೆ ತೆರಳಿ “ನನ್ನ ತಾಯಿಗೆ ಎಷ್ಟು ಹಣ ಕೊಟ್ಟಿದ್ದೀರಿ?” ಎಂದು ಸಿಬ್ಬಂದಿಯನ್ನು ವಿಚಾರಿಸಿದ್ದಾನೆ.

 ಸಿಬ್ಬಂದಿಯು ವಿತ್‌ಡ್ರಾ ಫಾರ್ಮ್ ಪರಿಶೀಲಿಸಿ ಫಾರ್ಮ್‌ನಲ್ಲಿ ₹2,100 ಬರೆಯಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ. ತಾನು ಮಾಡಿದ್ದು ತಪ್ಪು ಎಂದು ಅರಿವಾಗುತ್ತಿದ್ದಂತೆಯೇ, “ಇದು ಬರೆಯುವಾಗ ಆದ ಸಣ್ಣ ಅಚಾತುರ್ಯ (error)” ಎಂದು ನಕ್ಕು ನುಣುಚಿಕೊಳ್ಳಲು ಯತ್ನಿಸಿದ್ದಾನೆ.

ಇಲ್ಲಿದೆ ನೋಡಿ ವಿಡಿಯೋ:

ಮಗ ಕಠಿಣವಾಗಿ ಪ್ರಶ್ನೆ ಮಾಡಿ, ವಿಷಯವನ್ನು ಸಾರ್ವಜನಿಕವಾಗಿ ಬಯಲು ಮಾಡುವುದಾಗಿ ಹೇಳಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸಿದಾಗ, ಸಿಬ್ಬಂದಿ ಕೂಡಲೇ ಮತ್ತೊಂದು ₹100 ನೋಟನ್ನು ಆತನಿಗೆ ಹಿಂತಿರುಗಿಸಿದ್ದಾನೆ. ವಿಡಿಯೋ ಮಾಡದಂತೆ ತಡೆದರೂ, ಯುವಕ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

 ನಮ್ಮ ಸಮಾಜದಲ್ಲಿ ಅನೇಕ ಹಿರಿಯ ನಾಗರಿಕರು ಮತ್ತು ಅನಕ್ಷರಸ್ಥರಿಗೆ ಸರಿಯಾಗಿ ಓದಲು-ಬರೆಯಲು ಬರುವುದಿಲ್ಲ ಹಾಗೂ ಮೊಬೈಲ್ ಮೆಸೇಜ್ ಪರಿಶೀಲಿಸುವುದು ತಿಳಿದಿರುವುದಿಲ್ಲ. ಇಂತಹ ಅಮಾಯಕರನ್ನು ಗುರಿಯಾಗಿಸಿಕೊಂಡು ಬ್ಯಾಂಕ್ ಸಿಬ್ಬಂದಿ ಅಥವಾ ಏಜೆಂಟರು ಹಗಲು ದರೋಡೆ ಮಾಡುತ್ತಿದ್ದಾರೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ. ಹಿರಿಯ ನಾಗರಿಕರು ತಮ್ಮ ಜೀವಮಾನದ ಕಷ್ಟದ ಗಳಿಕೆಯನ್ನು ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಅತ್ಯಂತ ನಂಬಿಕೆಯಿಂದ ಇಡುತ್ತಾರೆ. ಪ್ರತಿಯೊಬ್ಬ ಗ್ರಾಹಕನಿಗೂ ಪ್ರಾಮಾಣಿಕತೆ, ಗೌರವ ಮತ್ತು ಪಾರದರ್ಶಕತೆ ಪಡೆಯುವ ಹಕ್ಕಿದೆ.

ಇದನ್ನೂ ಓದಿ: ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ, ಮುಂದಿನ ಪ್ರಧಾನಿ ಸಾಧು-ಸಂತರು: ದೇವರಗುಡ್ಡ ಕಾರ್ಣಿಕ

ಇಂತಹ ಘಟನೆಗಳು ಬೆಳಕಿಗೆ ಬಾರದೆ ಎಷ್ಟು ಮಂದಿ ಬಡ ಮತ್ತು ಹಿರಿಯ ಗ್ರಾಹಕರು ಪ್ರತಿದಿನ ತಮ್ಮ ಕಷ್ಟದ ಹಣವನ್ನು ಕಳೆದುಕೊಳ್ಳುತ್ತಿರಬಹುದು ಎನ್ನುವುದು ತೀವ್ರ ಕಳವಳಕಾರಿ ವಿಷಯವಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ