ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ, ಮುಂದಿನ ಪ್ರಧಾನಿ ಸಾಧು-ಸಂತರು: ದೇವರಗುಡ್ಡ ಕಾರ್ಣಿಕ

 

ಹಾವೇರಿ: ದಸರಾ ಮತ್ತು ನವರಾತ್ರಿ ಮಹೋತ್ಸವದ ಅಂಗವಾಗಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾದ ದೇವರಗುಡ್ಡದಲ್ಲಿ ನುಡಿಯಲಾದ ಮಾಲತೇಶ (ಮೈಲಾರಲಿಂಗೇಶ್ವರ) ದೇವರ ಕಾರ್ಣಿಕ ದೈವವಾಣಿಯು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬಾರಿಯ ಕಾರ್ಣಿಕದ ನುಡಿಯು ರಾಜಕೀಯ ಮತ್ತು ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಹತ್ವದ ಮುನ್ಸೂಚನೆಗಳನ್ನು ನೀಡಿದೆ. ದೇವರಗುಡ್ಡದಲ್ಲಿ ನುಡಿಯಲಾದ ಈ ಬಾರಿಯ ಪ್ರಸಿದ್ಧ ಕಾರ್ಣಿಕದ ನುಡಿ ‘ಕೆಂಪುಕೋಟೆಯ ಮೇಲೆ ಮುತ್ತು ಚಲ್ಲಿತ್ತಲೇ ಪರಾಕ್…’ ಎಂದಾಗಿದೆ.

ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಟ್ ಗುರೂಜಿ ಈ ಕುರಿತು ಮಾತನಾಡಿ, “ಕೆಂಪುಕೋಟೆ ಎಂದರೆ ದೇಶದ ಅತ್ಯುನ್ನತ ಆಡಳಿತ ಕೇಂದ್ರ. ಮುಂಬರುವ ದಿನಗಳಲ್ಲಿ ಕೆಂಪುಕೋಟೆಯ ಮೇಲೆ ಸಾಧು-ಸಂತರು ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಹಾಗೂ ದೇಶದ ಪ್ರಧಾನಮಂತ್ರಿಯಾಗುವ ಸ್ಪಷ್ಟ ಮುನ್ಸೂಚನೆಯನ್ನು ಮಾಲತೇಶ ದೇವರು ನೀಡಿದ್ದಾರೆ” ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ದೈವವಾಣಿಯ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮುಂದಿನ ದಿನಗಳಲ್ಲಿ ದೇಶದ ಪ್ರಧಾನಮಂತ್ರಿಯಾಗಲಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಹಾವೇರಿಯಲ್ಲಿ ಕಾರಹುಣ್ಣಿಮೆ ಹಬ್ಬದ ವೇಳೆ ಭೀಕರ ಕೋಮು ಘರ್ಷಣೆ!: ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕತ್ತರಿಸಿದ ಗುಂಪು

ರೈತ ಸಮುದಾಯಕ್ಕೆ ಸಮೃದ್ಧಿಯ ಆಶಾಕಿರಣ:

ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಭೀಕರ ಸಂಕಷ್ಟ ಎದುರಿಸಿದ್ದರು. ಆದರೆ ಕಾರ್ಣಿಕದಲ್ಲಿ ಉಲ್ಲೇಖವಾಗಿರುವ ‘ಮುತ್ತು ಚಲ್ಲಿತು’ ಎಂಬ ಪದದಂತೆ, ಮುಂಗಾರು ಮಳೆಯ ಕೊರತೆ ನೀಗಿಸಿ ಮುಂದಿನ ಹಿಂಗಾರು ಮಳೆ ಅತ್ಯಂತ ಸಮೃದ್ಧವಾಗಿ ಸುರಿಯಲಿದೆ ಎಂದು ವಿಶ್ಲೇಷಿಸಲಾಗಿದೆ.ರೈತರು ತಮ್ಮ ಹೊಲಗಳಲ್ಲಿ ಮುತ್ತಿನಂತಹ ಉತ್ತಮ ಬೆಳೆಗಳನ್ನು ಬೆಳೆದು, ಎಲ್ಲಾ ಆರ್ಥಿಕ ಸಂಕಷ್ಟಗಳಿಂದ ಪಾರಾಗಿ ಬಾಳಿನಲ್ಲಿ ನೆಮ್ಮದಿ ಕಾಣಲಿದ್ದಾರೆ ಎಂದು ಅರ್ಚಕರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ