ಹಾವೇರಿಯಲ್ಲಿ ಕಾರಹುಣ್ಣಿಮೆ ಹಬ್ಬದ ವೇಳೆ ಭೀಕರ ಕೋಮು ಘರ್ಷಣೆ!: ಮಸೀದಿ ಬಳಿ ಪಟಾಕಿ ಸಿಡಿಸಿದ್ದಕ್ಕೆ ರೈತನ ಕೈ ಕತ್ತರಿಸಿದ ಗುಂಪು

ಹಾವೇರಿ : ಕಾರಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹೋರಿ ಓಡಿಸುವ ಸ್ಪರ್ಧೆಯ ವೇಳೆ ಪಟಾಕಿ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ಭೀಕರ ಮಾರಾಮಾರಿ ನಡೆದು, ರೈತನೊಬ್ಬನ ಕೈ ಕತ್ತರಿಸಿರುವ ಅಮಾನುಷ ಘಟನೆ ಹಾವೇರಿ ಜಿಲ್ಲೆ ಹಾನಗಲ್ಲು ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ. ಸದ್ಯ ಘಟನೆಯಿಂದಾಗಿ ಇಡೀ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸೋಮವಾರ (ಜೂನ್ 29) ಕಾರಹುಣ್ಣಿಮೆ ಹಬ್ಬದ ಅಂಗವಾಗಿ ನರೇಗಲ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಹೋರಿ ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರೈತರು ತಮ್ಮ ಎತ್ತುಗಳನ್ನು ಓಡಿಸುವ ಸಂದರ್ಭದಲ್ಲಿ ಗ್ರಾಮದ ಮಸೀದಿ ಬಳಿ ಪಟಾಕಿ ಸಿಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಷಾಸಾಬ ಗೌಂಡಿ ಎಂಬುವರು, “ನಮ್ಮ ಮಸೀದಿ ಬಳಿ ಏಕೆ ಪಟಾಕಿ ಸಿಡಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೋಮು ಘರ್ಷಣೆಯಾಗಿ ಮಾರ್ಪಟ್ಟಿದೆ.

Advertisement

ಹೋರಿ ಹಿಂದೆ ಬರುತ್ತಿದ್ದ ಲೋಹಿತ್ ಜಯಪ್ಪ ಎಂಬುವರ ಮೇಲೆ ಒಂದು ಗುಂಪು ಹಲ್ಲೆ ನಡೆಸಿದ ಬೆನ್ನಲ್ಲೇ, ಉದ್ವಿಗ್ನಗೊಂಡ ಮತ್ತೊಂದು ಗುಂಪು ಕುಡುಗೋಲು ಸೇರಿದಂತೆ ಭೀಕರ ಆಯುಧಗಳಿಂದ ಪ್ರತಿದಾಳಿ ನಡೆಸಿದೆ. ಈ ಗಲಾಟೆಯಲ್ಲಿ ಓರ್ವ ರೈತನ ಕೈ ಸಂಪೂರ್ಣ ಕತ್ತರಿಸಲಾಗಿದ್ದು, ಇನ್ನು ಇಬ್ಬರ ಕೈಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಭೀಕರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಹರೀಶ್ ರಾಮಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಒಟ್ಟು 26 ಜನರ ವಿರುದ್ಧ ಎಫ್‌ಐಆರ್ (Case No. 109/2026) ದಾಖಲಿಸಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಖ್ವಾಜಾ, ಬಾಷಾಸಾಬ, ಮೆಹಬೂಬ್ ಅಲಿ, ಮಹಬೂಬಸಾಬ ಸೇರಿದಂತೆ 26 ಜನರನ್ನು ಹೆಸರಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 189(2) [ಕಾನೂನುಬಾಹಿರ ಕೂಟ] ಮತ್ತು 191(2) [ದಂಗೆ] ಸೇರಿದಂತೆ ವಿವಿಧ ಕಠಿಣ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಆಡೂರು ಠಾಣೆ ಪೊಲೀಸರು ನರೇಗಲ್ ಗ್ರಾಮವನ್ನು ಪೊಲೀಸ್ ಕಾವಲಿಗೆ ಒಳಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 20ಕ್ಕೂ ಅಧಿಕ ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

ಇದನ್ನೂ ಓದಿ: ಕರ್ನಾಟಕದ ಹಲವು ನ್ಯಾಯಾಲಯಗಳಿಗೆ ಸರಣಿ ಬಾಂಬ್ ಬೆದರಿಕೆ ಇಮೇಲ್!; ಮಂಗಳೂರು, ಚಾಮರಾಜನಗರ ಹಾಗೂ ಹಾವೇರಿಯಲ್ಲಿ ಆತಂಕದ ವಾತಾವರಣ

ರೈತನ ಕೈ ಕತ್ತರಿಸಿದ ಈ ಭೀಕರ ಘಟನೆ ಈಗ ರಾಜ್ಯ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು (ಜೂನ್ 30) ಮಧ್ಯಾಹ್ನ 3:30 ಕ್ಕೆ ನರೇಗಲ್ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಲಿದ್ದಾರೆ. ಗಲಾಟೆಯ ಕುರಿತು ಸ್ಥಳೀಯರಿಂದ ಮತ್ತು ಪೊಲೀಸರಿಂದ ಮಾಹಿತಿ ಪಡೆದ ಬಳಿಕ, ಅವರು ಹಾವೇರಿ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ರೈತರ ಆರೋಗ್ಯ ವಿಚಾರಿಸಲಿದ್ದಾರೆ. ವಿರೋಧ ಪಕ್ಷಗಳು ಈ ಘಟನೆಯನ್ನು ಮುಂದಿಟ್ಟುಕೊಂಡು ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯದ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *