ಮುಂಬೈ: ಇತ್ತೀಚಿನ ದಿನಗಳಲ್ಲಿ ದೇಹದ ಆರೋಗ್ಯ, ರೋಗನಿರೋಧಕ ಶಕ್ತಿ ಹಾಗೂ ಸೌಂದರ್ಯ ಹೆಚ್ಚಿಸಿಕೊಳ್ಳಲು ವಿಟಮಿನ್, ಮಿನರಲ್ ಮತ್ತು ಗಿಡಮೂಲಿಕೆ ಆಧಾರಿತ ಡಯಟರಿ ಸಪ್ಲಿಮೆಂಟ್ಗಳನ್ನು (Dietary Supplements) ಸೇವಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ, ದೇಹಕ್ಕೆ ನಿಜವಾಗಿಯೂ ಸಪ್ಲಿಮೆಂಟ್ ಅಗತ್ಯವಿದೆಯೇ ಎಂದು ತಿಳಿಯದೆ ಮನಸೋ ಇಚ್ಛೆ ಸೇವಿಸುವುದು ಒಳಿತಿಗಿಂತ ಹೆಚ್ಚಾಗಿ ಅಪಾಯವನ್ನೇ ತಂದೊಡ್ಡಬಹುದು. ಈ ಕುರಿತು ಮುಂಬೈ ಮುಂಬೈ ಸೆಂಟ್ರಲ್ನ ವೋಕಾರ್ಡ್ ಆಸ್ಪತ್ರೆಯ (Wockhardt Hospitals) ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ್ತಿ ಡಾ. ರಿತುಜಾ ಉಗಾಲ್ಮುಗ್ಲೆ ಅವರು, ಯಾವುದೇ ದಿನನಿತ್ಯದ ಸಪ್ಲಿಮೆಂಟ್ ಸೇವನೆ ಆರಂಭಿಸುವ ಮುನ್ನ ನೆನಪಿನಲ್ಲಿಡಬೇಕಾದ 3 ಪ್ರಮುಖ ಅಂಶಗಳ ಕುರಿತು ವಿವರವಾದ ಎಚ್ಚರಿಕೆ ನೀಡಿದ್ದಾರೆ.
ಸಪ್ಲಿಮೆಂಟ್ ನಿಜವಾಗಿಯೂ ಅಗತ್ಯವಿದೆಯೇ ಎಂಬುದನ್ನು ತಿಳಿಯಿರಿ:
ಸಪ್ಲಿಮೆಂಟ್ಗಳನ್ನು ಮುಂಜಾಗ್ರತಾ ಕ್ರಮವಾಗಿ ಸುಮ್ಮನೆ ಸೇವಿಸುವುದಕ್ಕಿಂತ ಹೆಚ್ಚಾಗಿ, ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಮಾತ್ರ ಬಳಸಬೇಕು.

ವೈಯಕ್ತಿಕ ಆರೋಗ್ಯದ ಮೇಲೆ ನಿರ್ಧಾರ: ಸಪ್ಲಿಮೆಂಟ್ ಅಗತ್ಯತೆಯು ವ್ಯಕ್ತಿಯ ಆಹಾರ ಪದ್ಧತಿ, ಜೀವನಶೈಲಿ, ವಯಸ್ಸು ಮತ್ತು ಪ್ರಸ್ತುತ ಇರುವ ಆರೋಗ್ಯ ಸ್ಥಿತಿಯನ್ನು ಆಧರಿಸಿರುತ್ತದೆ.
ರಕ್ತ ಪರೀಕ್ಷೆ ಅತ್ಯಗತ್ಯ: ದೇಹದಲ್ಲಿ ವಿಟಮಿನ್ B12, ವಿಟಮಿನ್ D ಅಥವಾ ಕಬ್ಬಿನಾಂಶದ (Iron) ಕೊರತೆ ಇದೆಯೇ ಎಂಬುದನ್ನು ವೈದ್ಯಕೀಯ ರಕ್ತ ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಂಡ ನಂತರವೇ ವೈದ್ಯರು ನೀಡುವ ಪ್ರಮಾಣದಲ್ಲಿ ಸಪ್ಲಿಮೆಂಟ್ ತಗೋಬೇಕು.

ಸೋಷಿಯಲ್ ಮೀಡಿಯಾ ಸಲಹೆ ನಂಬಬೇಡಿ: ಸಾಮಾಜಿಕ ಜಾಲತಾಣಗಳು ಅಥವಾ ಸ್ನೇಹಿತರ ಮಾತು ಕೇಳಿ ಸ್ವಯಂ-ಔಷಧಿ (Self-prescription) ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿ. ಇದು ದೇಹದಲ್ಲಿ ಪೋಷಕಾಂಶಗಳ ಮಟ್ಟವನ್ನು ಅತಿಯಾಗಿಸಿ, ಮೂಲ ಕಾಯಿಲೆಯ ಪತ್ತೆಯನ್ನು ತಡಮಾಡಬಹುದು.
ಸೇವಿಸುವ ಪ್ರಮಾಣ (Dosage) ಮತ್ತು ಅವಧಿಯ ಕಡೆಗೆ ಗಮನವಿರಲಿ:
ಹೆಚ್ಚು ಸಪ್ಲಿಮೆಂಟ್ ಸೇವಿಸಿದ ತಕ್ಷಣವೇ ಉತ್ತಮ ಆರೋಗ್ಯ ಸಿಗುತ್ತದೆ ಎನ್ನುವುದು ಸಂಪೂರ್ಣ ತಪ್ಪು ಕಲ್ಪನೆ.

ಅತಿಯಾದರೆ ವಿಷ: ವೈದ್ಯರು ಸೂಚಿಸಿದ ಅಥವಾ ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಸಪ್ಲಿಮೆಂಟ್ ತಗೆದುಕೊಂಡರೆ ಅದು ದೇಹದ ಅಂಗಾಂಗಗಳಿಗೆ ಹಾನಿ ಉಂಟುಮಾಡಬಹುದು.
ಆಹಾರಕ್ಕೆ ಪರ್ಯಾಯವಲ್ಲ: ಸಪ್ಲಿಮೆಂಟ್ಗಳು ಸಮತೋಲಿತ ಆಹಾರಕ್ಕೆ ಬೆಂಬಲ ನೀಡುತ್ತವೆಯೇ ಹೊರತು, ಅವು ಪೌಷ್ಟಿಕ ಆಹಾರ ಅಥವಾ ಮುಖ್ಯ ಚಿಕಿತ್ಸೆಗೆ ಪರ್ಯಾಯವಾಗಲು ಸಾಧ್ಯವಿಲ್ಲ.
ಪದಾರ್ಥಗಳು ಮತ್ತು ಔಷಧೀಯ ಅಡ್ಡಪರಿಣಾಮ ಪರಿಶೀಲಿಸಿ:
ಯಾವುದೇ ಸಪ್ಲಿಮೆಂಟ್ ಖರೀದಿಸುವ ಮುನ್ನ ಅದರ ಲೇಬಲ್ (Label) ಅನ್ನು ಜಾಗರೂಕತೆಯಿಂದ ಓದಬೇಕು.
‘ನ್ಯಾಚುರಲ್’ ಎಂದರೆ ಸಂಪೂರ್ಣ ಸುರಕ್ಷಿತವಲ್ಲ: ಗಿಡಮೂಲಿಕೆ ಆಧಾರಿತ ಎಕ್ಸ್ಟ್ರಾಕ್ಟ್ಗಳು ನೈಸರ್ಗಿಕ ಎಂದು ಜಾಹೀರಾತು ಮಾಡಿದರೂ, ಅವು ಪ್ರತಿಯೊಬ್ಬರಿಗೂ ಸುರಕ್ಷಿತವಾಗಿರಬೇಕಿಲ್ಲ.
ಇತರ ಕಾಯಿಲೆಗಳಿದ್ದರೆ ಎಚ್ಚರ: ಮಧುಮೇಹ (Diabetes), ರಕ್ತದೊತ್ತಡ (BP), ಹೃದಯಸಂಬಂಧಿ ಕಾಯಿಲೆ ಹಾಗೂ ರಕ್ತ ತೆಳುವಾಗಿಸುವ ಮಾತ್ರೆಗಳನ್ನು (Blood Thinners) ತೆಗೆದುಕೊಳ್ಳುತ್ತಿರುವವರು ಸಪ್ಲಿಮೆಂಟ್ ಬಳಸುವ ಮುನ್ನ ವೈದ್ಯರಿಗೆ ಮಾಹಿತ ನೀಡಬೇಕು. ಏಕೆಂದರೆ ಸಪ್ಲಿಮೆಂಟ್ಗಳು ನೀವು ತೆಗೆದುಕೊಳ್ಳುವ ಮುಖ್ಯ ಮಾತ್ರೆಗಳ ಕಾರ್ಯಕ್ಷಮತೆಯನ್ನು ಬದಲಾಯಿಸಬಹುದು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


