ಮಣಿಪಾಲ: ಶಿಕ್ಷಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಉಡುಪಿಯ ಮಣಿಪಾಲದಲ್ಲಿ ನಡುರಾತ್ರಿ ಪುಂಡರ ಗುಂಪೊಂದು ನಡುರಸ್ತೆಯಲ್ಲೇ ಮಾರಾಮಾರಿ ನಡೆಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವಿಪರೀತ ಮದ್ಯಪಾನ ಮಾಡಿ ತೂರಾಡುತ್ತಿದ್ದ ಯುವಕರ ಗುಂಪು, ಜನಸಂಚಾರವಿರುವ ಮುಖ್ಯ ರಸ್ತೆಯಲ್ಲೇ ಬೀದಿ ರಂಪಾಟ ನಡೆಸಿ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ವಿಶೇಷವೆಂದರೆ, ಈ ಭೀಕರ ಗಲಾಟೆ ಮಣಿಪಾಲ ಪೊಲೀಸ್ ಠಾಣೆಯ ಕೆಲವೇ ಮೀಟರ್ಗಳ ಅಂತರದಲ್ಲಿ ನಡೆದಿದ್ದು, ಕೃತ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ರಸ್ತೆ ಮಧ್ಯೆ ಮೊದಲು ಇಬ್ಬರು ಯುವಕರ ನಡುವೆ ಸಣ್ಣದಾಗಿ ಆರಂಭವಾದ ವಾಗ್ವಾದ, ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿ ದೊಡ್ಡ ಗುಂಪಿನ ನಡುವಿನ ಹಿಂಸಾತ್ಮಕ ಹೊಡೆದಾಟವಾಗಿ ಮಾರ್ಪಟ್ಟಿದೆ. ಮಣಿಪಾಲದಲ್ಲಿ ದಿನೇ ದಿನೇ ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತಡರಾತ್ರಿ ಅಲ್ಲಿ ನಡೆಯುತ್ತಿದ್ದ ಗಲಾಟೆಗಳು ಇದೀಗ ಮದ್ಯಬೀದಿಗೆ ತಲುಪಿವೆ. ಹಿಂದೆ ನಿಯಮ ಉಲ್ಲಂಘಿಸಿ ತಡರಾತ್ರಿವರೆಗೆ ತೆರೆಯುತ್ತಿದ್ದ ಬಾರ್-ಪಬ್ಗಳ ಮೇಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಪೊಲೀಸರ ಭಯವೇ ಇಲ್ಲದೆ ಅವಧಿ ಮೀರಿ ಮದ್ಯ ಪೂರೈಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

ಇದನ್ನೂ ಓದಿ: ಉಡುಪಿಯಲ್ಲಿ ಯುವಕ ಆತ್ಮಹತ್ಯೆ ಪ್ರಕರಣ: 10ಕ್ಕೂ ಹೆಚ್ಚು ಮಂದಿಯ ವಿರುದ್ಧ ಕೇಸ್ ದಾಖಲು
ಇಲ್ಲಿದೆ ನೋಡಿ ವಿಡಿಯೋ:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಮಾರಾಮಾರಿಯ ವೀಡಿಯೋ ಕಂಡು ಕರಾವಳಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಶಾಂತಿ ಭಂಗ ಉಂಟುಮಾಡಿದ ಪುಂಡರ ವಿರುದ್ಧ ಹಾಗೂ ನಿಯಮ ಮೀರಿ ಕಾರ್ಯಾಚರಿಸುವ ಪಬ್ಗಳ ವಿರುದ್ಧ ಮಣಿಪಾಲ ಪೊಲೀಸರು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


