ಬೆಂಗಳೂರು: ರಾಜಧಾನಿ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ಕಳ್ಳತನದ ಘಟನೆಯೊಂದು ನಡೆದಿದೆ. 1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಭಾರತೀಯ ಹಾಕಿ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಕಿ ದಿಗ್ಗಜ, 67 ವರ್ಷದ ಎಂ.ಎಂ. ಸೋಮಯ್ಯ (MM Somaya) ಅವರ ಮನೆಯ ಬೀಗ ಮುರಿದಿರುವ ದುಷ್ಕರ್ಮಿಗಳು, ದೇಶದ ಹೆಮ್ಮೆಯ ಸಂಕೇತವಾಗಿದ್ದ ಒಲಿಂಪಿಕ್ಸ್ ಚಿನ್ನದ ಪದಕ, ಅಂತರರಾಷ್ಟ್ರೀಯ ಪದಕಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಎಂ.ಎಂ. ಸೋಮಯ್ಯ ಅವರು ಕುಟುಂಬ ಸಮೇತ ಹೆಚ್ಎಎಲ್ 3ನೇ ಹಂತದಲ್ಲಿರುವ (HAL 3rd Stage) ತಮ್ಮ ನಿವಾಸಕ್ಕೆ ಬೀಗ ಹಾಕಿ ಕೊಡಗಿಗೆ ತೆರಳಿದ್ದರು. ಅಕ್ಟೋಬರ್ 28 ರಂದು ಬೆಳಿಗ್ಗೆ ಸುಮಾರು 7.15 ಕ್ಕೆ ಸೋಮಯ್ಯ ಅವರ ನೆರೆಯ ನಿವಾಸಿ ನಾರಾಯಣನ್ ಎಂಬುವರು ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ, ಕಳ್ಳತನವಾಗಿರುವ ಶಂಕೆ ವ್ಯಕ್ತಪಡಿಸಿ ಸೋಮಯ್ಯ ಅವರಿಗೆ ತಕ್ಷಣವೇ ಮಾಹಿತಿ ನೀಡಿದ್ದಾರೆ.

ನೆರೆಮನೆಯ ಸಿಸಿಟಿವಿ ಫೂಟೇಜ್ (CCTV Footage) ಪರಿಶೀಲಿಸಿದಾಗ, ಅಕ್ಟೋಬರ್ 28 ರಂದು ನಸುಕಿನ 2.34 ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಓರ್ವ ಆರೋಪಿ ನೀಲಿ ಶರ್ಟ್ ಹಾಗೂ ಮತ್ತೋರ್ವ ಕೆಂಪು ಶರ್ಟ್ ಧರಿಸಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಇದನ್ನೂ ಓದಿ: ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುವುದನ್ನು ಕಲಿತಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಕಳುವಾದ ದೇಶದ ಹೆಮ್ಮೆಯ ಐತಿಹಾಸಿಕ ಪದಕಗಳು:
ದುಷ್ಕರ್ಮಿಗಳು ಸೋಮಯ್ಯ ಅವರ ಭಾರತೀಯ ಹಾಕಿ ಜೀವನದ ಸ್ಮರಣೀಯ ಸಾಧನೆಗಳಾಗಿದ್ದ ಅತ್ಯಮೂಲ್ಯ ಅಂತರರಾಷ್ಟ್ರೀಯ ಪದಕಗಳನ್ನು ದೋಚಿದ್ದಾರೆ:
1980 ಮಾಸ್ಕೋ ಒಲಿಂಪಿಕ್ಸ್: ಭಾರತ ತಂಡ ಗೆದ್ದಿದ್ದ ಐತಿಹಾಸಿಕ ಚಿನ್ನದ ಪದಕ (Gold Medal)

1982 ನವದೆಹಲಿ ಏಷ್ಯನ್ ಗೇಮ್ಸ್: ಬೆಳ್ಳಿ ಪದಕ (Silver Medal)
1986 ಸಿಯೋಲ್ ಏಷ್ಯನ್ ಗೇಮ್ಸ್: ಕಂಚಿನ ಪದಕ (Bronze Medal)
1982 ಆಮ್ಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿ: ಕಂಚಿನ ಪದಕ (Bronze Medal)
ಅಪರೂಪದ ಪದಕಗಳ ಜೊತೆಗೆ, ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಇತರ ವಸ್ತುಗಳನ್ನೂ ಎಗರಿಸಿದ್ದಾರೆ: 10 ಗ್ರಾಂ ತೂಕದ ಚಿನ್ನದ ಬಳೆ, 8 ಗ್ರಾಂ ತೂಕದ ಚಿನ್ನದ ನಾಣ್ಯ, 144 ಗ್ರಾಂ ತೂಕದ ಎರಡು ಬೆಳ್ಳಿಯ ಕಪ್ಗಳು ಹಾಗೂ 6 ಬೆಳ್ಳಿಯ ಚಮಚಗಳು, 80 ಗ್ರಾಂ ತೂಕದ ಬೆಳ್ಳಿಯ ಬಿಂದಿಗೆ/ಪಾತ್ರೆ ₹30,000 ನಗದು ಹಣ ಕಳವು ಮಾಡಲಾಗಿದೆ.
ಘಟನೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. “ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಬಂಧಿಸಲು ಎರಡು ಪ್ರತ್ಯೇಕ ವಿಶೇಷ ಪಡೆಗಳನ್ನುರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ, ಪದಕಗಳನ್ನು ವಶಪಡಿಸಿಕೊಳ್ಳಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


