ಭಾರತೀಯ ಸಿನಿಮಾ ರಂಗದ ಪ್ರತಿಷ್ಠಿತ ಹಬ್ಬವಾದ 57ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 20ರಿಂದ 28ರವರೆಗೆ ನಡೆಯಲಿದ್ದು, ಚಿತ್ರೋತ್ಸವದ ಪ್ರಮುಖ ವಿಭಾಗಗಳಾದ ‘ಇಂಡಿಯನ್ ಪನೋರಮಾ’ ಮತ್ತು ‘ಬ್ರಿಕ್ಸ್’ ವಿಭಾಗಗಳ ಉದ್ಘಾಟನಾ ಚಿತ್ರಗಳನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆ ಬರೆದಿರುವ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಬ್ರಿಕ್ಸ್ ದೇಶಗಳ ಸಿನಿಮಾಗಳ ವಿಶೇಷ ವಿಭಾಗವನ್ನು ಉದ್ಘಾಟಿಸಲಿದ್ದರೆ, ಬಾಲಿವುಡ್ನ ಜನಪ್ರಿಯ ಚಿತ್ರ ‘ಧುರಂಧರ್’ ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (NFDC) ವ್ಯವಸ್ಥಾಪಕ ನಿರ್ದೇಶಕ ಧೀರಜ್ ಸಿಂಗ್, ಆಯ್ಕೆ ಸಮಿತಿ ಮತ್ತು ತೀರ್ಪುಗಾರರು ಈ ಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು. ಇಂಡಿಯನ್ ಪನೋರಮಾದ ಫೀಚರ್ ಫಿಲ್ಮ್ ವಿಭಾಗದಲ್ಲಿ ‘ಧುರಂಧರ್’ ಮೊದಲ ಚಿತ್ರವಾಗಿ ಪ್ರದರ್ಶನ ಕಾಣಲಿದ್ದರೆ, ಲಡಾಖಿ ಭಾಷೆಯ ‘ಬಿಕಮಿಂಗ್’ (Becoming) ಸಿನಿಮಾ ನಾನ್-ಫೀಚರ್ ಫಿಲ್ಮ್ ವಿಭಾಗವನ್ನು ಉದ್ಘಾಟಿಸಲಿದೆ.

ಭಾರತೀಯ ಚಿತ್ರರಂಗದ ಅತ್ಯುತ್ತಮ ಮತ್ತು ಪ್ರಾದೇಶಿಕ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳಿಗೆ ಇಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗುತ್ತದೆ. ಈ ಬಾರಿ ಇಂಡಿಯನ್ ಪನೋರಮಾ ವಿಭಾಗದಲ್ಲಿ 25 ಫೀಚರ್ ಫಿಲ್ಮ್ಗಳು ಮತ್ತು 20 ನಾನ್-ಫೀಚರ್ ಫಿಲ್ಮ್ಗಳು ಪ್ರದರ್ಶನಗೊಳ್ಳಲಿವೆ. 57ನೇ IFFI ಚಿತ್ರೋತ್ಸವದ ನಿರ್ದೇಶಕರಾಗಿ ನೇಮಕಗೊಂಡಿರುವ ಖ್ಯಾತ ಚಿತ್ರನಿರ್ದೇಶಕ ಅಶುತೋಷ್ ಗೋವಾರಿಕರ್ ಮಾತನಾಡಿ, ಈ ವರ್ಷದ ಚಿತ್ರೋತ್ಸವವನ್ನು ‘ಗಡಿಗಳಿಲ್ಲದ ಕಥೆಗಳು’ ಎಂಬ ವಿಶೇಷ ಥೀಮ್ ಅಡಿಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.”ಇಂದು ಗಡಿಗಳು ಕೇವಲ ಭೂಪಟದ ಮೇಲಿನ ಗೆರೆಗಳಾಗಿ ಉಳಿದಿಲ್ಲ, ಅವು ನಮ್ಮ ಅಭ್ಯಾಸಗಳೂ ಆಗಿವೆ. ಪಾಸ್ಪೋರ್ಟ್ ಇಲ್ಲದೆಯೇ ಇಂತಹ ಗಡಿಗಳನ್ನು ದಾಟಬಲ್ಲ ಕೆಲವೇ ಕೆಲವು ಸಂಗತಿಗಳಲ್ಲಿ ಕಥೆಯೂ ಒಂದು. ಸಿನಿಮಾ ಮಾಡುವ ಅತ್ಯುತ್ತಮ ಕೆಲಸವೇ ಅದು” ಎಂದು ಗೋವಾರಿಕರ್ ಅಭಿಪ್ರಾಯಪಟ್ಟರು.
ನವೆಂಬರ್ 20ರಂದು ಪಾವೆಲ್ ಪಾವ್ಲಿಕೋವ್ಸ್ಕಿ ನಿರ್ದೇಶನದ 2026ರ ಪೋಲಿಷ್ ಬಯೋಗ್ರಾಫಿಕಲ್ ಸಿನಿಮಾ ‘ಫಾದರ್ಲ್ಯಾಂಡ್’ ಪ್ರದರ್ಶನದೊಂದಿಗೆ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ನವೆಂಬರ್ 28ರಂದು ಸಿಂಗಾಪುರದ ‘ವಿ ಆರ್ ಆಲ್ ಸ್ಟ್ರೇಂಜರ್ಸ್’ ಸಮಾರೋಪ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. 137 ದೇಶಗಳಿಂದ ಬಂದಿದ್ದ 1,900 ಅರ್ಜಿಗಳ ಪೈಕಿ, ಒಟ್ಟು 87 ದೇಶಗಳ 159 ಅಂತಾರಾಷ್ಟ್ರೀಯ ಸಿನಿಮಾಗಳು ಹಾಗೂ 18 ವಿವಿಧ ಭಾಷೆಗಳ 76 ಭಾರತೀಯ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.

ಈ ಬಾರಿ ಸ್ಪೇನ್ ದೇಶಕ್ಕೆ ‘ಕಂಟ್ರಿ ಆಫ್ ಆನರ್’ ಗೌರವ ನೀಡಲಾಗಿದ್ದು, ಸ್ಪೇನ್ನ 4 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ರಷ್ಯಾ ಪಾಲುದಾರ ದೇಶವಾಗಿದ್ದು, ಅಲ್ಲಿನ 4 ವಿಶೇಷ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಸಿನಿಮಾ ಪ್ರೇಮಿಗಳಿಗೆ ವಿಭಿನ್ನ ಅನುಭವ ನೀಡಲು ಈ ಬಾರಿ ‘ಅನಿಮೇಷನ್’ ಮತ್ತು ‘ಫಿಲ್ಮ್ಸ್ ಅಬೌಟ್ ಫಿಲ್ಮ್ಸ್’ ಎಂಬ ಎರಡು ಹೊಸ ವಿಭಾಗಗಳನ್ನು ಪರಿಚಯಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ತಲಾ 5 ಅತ್ಯುತ್ತಮ ಚಿತ್ರಗಳು ಪ್ರದರ್ಶನ ಕಾಣಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

