ಹಾವೇರಿ: ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ಲಾಟ್‌ಫಾರ್ಮ್ ಮೇಲೆ ಬಸ್ ನುಗ್ಗಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಹಾವೇರಿ-ಲಕ್ಷ್ಮೇಶ್ವರ ಮಾರ್ಗದ ಸಾರಿಗೆ ಬಸ್ (KA-27/F-0665) ನಿಲ್ದಾಣಕ್ಕೆ ವೇಗವಾಗಿ ಬಂದಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್, ನೇರವಾಗಿ ಪ್ಲಾಟ್‌ಫಾರ್ಮ್ ನಂ. 2ಕ್ಕೆ ನುಗ್ಗಿದೆ. ಬಸ್ ಬರುವುದನ್ನು ಕಂಡು ಅಲ್ಲಿದ್ದ ಪ್ರಯಾಣಿಕರು ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ಸವಣೂರು ಮೂಲದ ಇಸ್ಮಾಯಿಲ್ ಅವರ 2 ವರ್ಷದ ಪುತ್ರ ಹಜರತ್ ಅಲಿ ರಾಯಚೂರು ಬಸ್ಸಿನ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದನು.

Karnataka’s reckless KSRTC bus driver!
At Haveri Central Bus Stand at 7am today
2yr old boy killed, three others hospitalised..driver on the run pic.twitter.com/oDa39o1a13
— Nabila Jamal (@nabilajamal_) April 1, 2026
ಗಂಭೀರ ಸ್ಥಿತಿಯಲ್ಲಿದ್ದ ಮಗುವಿಗೆ ಮೊದಲು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಮಗುವಿನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಲ್ಲಿ ಬ್ಯಾಂಕಾಪುರ ಮೂಲದ ವಾಸುದೇವ (44), ಹರ್ಷ (6), ಕಾವ್ಯಾಂಜಲಿ (39) ಸೇರಿದಂತೆ ಇತರ ನಾಲ್ಕು ಮಂದಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ: ಬಂಟ್ವಾಳ: ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ವೇಗದೂತ ಕಾರು; ಭೀಕರ ಅಪಘಾತದ ದೃಶ್ಯ
ಅಪಘಾತದ ಬೆನ್ನಲ್ಲೇ ಬಸ್ ಚಾಲಕ ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದಾನೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಸ್ಸಿನ ಬ್ರೇಕ್ ವೈಫಲ್ಯವೋ ಅಥವಾ ಚಾಲಕನ ಅಜಾಗರೂಕತೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



