ಭಾರತದ ಶೋಷಿತ ಸಮಾಜದ ಏಳಿಗೆಗಾಗಿ ಜೀವನ ಮುಡಿಪಾಗಿಟ್ಟು ಶ್ರಮಿಸಿದವರು ಡಾ. ಬಿ ಆರ್ ಅಂಬೇಡ್ಕರ್. ಸಂಕಷ್ಟಗಳಿಂದ ಕೂಡಿದ ಜೀವನದಲ್ಲಿಯೇ ಅವರು ಸಾಧನೆಯ ಶಿಖರ ತಲುಪಿದವರು.
ನಮ್ಮ ದೇಶದ ಬಹುಸಂಖ್ಯಾತ ಜನರಿಗೆ ಅವರೇ ಪ್ರೇರಣೆ. ಅವರ ಜೀವನದ ಕೆಲವು ಸತ್ಯ ಘಟನೆಗಳನ್ನು ತಿಳಿದುಕೊಂಡ ನನ್ನಂತ ಹಲವಾರು ಹೃದಯಗಳಿಗೆ ಅವರು ಆದರ್ಶ ವ್ಯಕ್ತಿ. ಅವರ ಜೀವನದ ವಿಚಾರಗಳನ್ನು ಅರಿತಾಗ ಮನಸ್ಸು ರೋಮಾಂಚನಗೊಳ್ಳುತ್ತದೆ.

ಅಂಬೇಡ್ಕರ್ 1891ರ ಏಪ್ರಿಲ್ 14ರಂದು ಬಡ ಕುಟುಂಬದಲ್ಲಿ ಜನಿಸಿದರು. ತಮ್ಮ ಸಣ್ಣ ವಯಸ್ಸಿನಿಂದಲೇ ದೇಶದ ಬಗ್ಗೆ ಚಿಂತನೆ ಮಾಡುತ್ತಿದ್ದರು. ಶಿಕ್ಷಣವೇ ಭಾರತದ ಬದಲಾವಣೆಗೆ ದಾರಿ ಎಂಬುದನ್ನು ಅವರು ಅರಿತುಕೊಂಡರು. ಶಿಕ್ಷಣ ಮತ್ತು ಉತ್ತಮ ಚಿಂತನೆಯ ಮೂಲಕ ಭಾರತದ ರೂಪರೇಷೆಯನ್ನು ಬದಲಿಸಿದರು. ವಿವಿಧ ದೇಶದ ಸಂವಿಧಾನಗಳನ್ನು ಅಧ್ಯಯನ ಮಾಡಿ ಪ್ರಪಂಚದ ಎಲ್ಲಾ ಸಂವಿಧಾನಕ್ಕಿಂತ ದೊಡ್ಡ ಸಂವಿಧಾನ ಭಾರತಕ್ಕೆ ಬರೆದರು. ಅದು ಭಾರತೀಯರಿಗೆ ಮರೆಯಲಾಗದ ಕೊಡುಗೆ.ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಕ್ಕೂ ಸಮಾಜದ ಬದಲಾವಣೆಗೆ ಶ್ರಮಿಸಿದರು.

ಅವರ ಬಗ್ಗೆ ಒಂದು ಘಟನೆ ಬಹಳ ಹೃದಯಸ್ಪರ್ಶಿ. ಅವರು ವಿದೇಶದಲ್ಲಿ ಗ್ರಂಥಾಲಯದಲ್ಲಿ ಓದುತ್ತಿದ್ದಾಗ, ತಮ್ಮ ಮಗನ ಮರಣದ ಸುದ್ದಿ ಪತ್ರದ ಮೂಲಕ ಬರುತ್ತದೆ. ಅದನ್ನು ತಿಳಿದು ಕಣ್ಣೀರು ಬಂದರೂ, ಅವರು ತಮ್ಮ ಓದನ್ನು ನಿಲ್ಲಿಸಲಿಲ್ಲ. ತಮ್ಮ ಸಹಪಾಠಿಗಳು ಮನೆಗೆ ಹೋಗಿ ಬರಲು ಹೇಳಿದಾಗ, “ನನ್ನ ಮಗ ಸತ್ತಿದ್ದಾನೆಂದು ನಾನು ಮನೆಗೆ (ಭಾರತಕ್ಕೆ) ಹೋದರೆ ನನ್ನ ಮೇಲೆ ನಂಬಿಕೆ ಇಟ್ಟು ಕುಳಿತ ನನ್ನ ಭಾರತೀಯ ಜನರ ಜೀವನ ಸಾಯುತ್ತದೆ. ನನ್ನ ಮಗ ಸತ್ತರೆ ನನಗೆ ತೊಂದರೆ ಇಲ್ಲ. ಆದರೆ ನನ್ನ ಭಾರತೀಯ ಮಕ್ಕಳು ಸ್ವತಂತ್ರವಾಗಬೇಕು’ ಎಂದು ಹೇಳಿದರಂತೆ. ಇದು ಅವರ ದೇಶಭಕ್ತಿಯ ಮಹತ್ವವನ್ನು ತೋರಿಸುತ್ತದೆ .
ಅಂಬೇಡ್ಕರ್ ಅವರ ಜೀವನದಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು. ಸಂಕಷ್ಟಗಳ ನಡುವೆಯೂ ಹಿಂಜರಿಯದೆ ಗುರಿಯ ಕಡೆಗೆ ಸಾಗುವ ಮನೋಭಾವ, ಶಿಕ್ಷಣದ ಮಹತ್ವ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು—ಇವೆಲ್ಲವೂ ಅವರ ಜೀವನದ ಪ್ರಮುಖ ಸಂದೇಶಗಳಾಗಿವೆ. “ಶಿಕ್ಷಿತರಾಗಿ, ಆಂದೋಲನ ಮಾಡಿ , ಸಂಘಟಿತರಾಗಿ” ಎಂಬ ಅವರ ಮಂತ್ರವು ಇಂದಿಗೂ ಯುವಜನತೆಗೆ ಪ್ರೇರಣೆ ನೀಡುತ್ತಿದೆ.

ಅಂಬೇಡ್ಕರ್ ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದ್ದು, ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಆದ್ದರಿಂದಲೇ ಡಾ. ಬಿ.ಆರ್. ಅಂಬೇಡ್ಕರ್ ಅವರು ನಮ್ಮೆಲ್ಲರಿಗೂ ಆದರ್ಶ ವ್ಯಕ್ತಿ. “ಜೀವನ ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು” ಎಂಬ ಅವರ ಮಾತುಗಳು ಇಂದು ಸಹ ನಮ್ಮನ್ನು ಪ್ರೇರೇಪಿಸುತ್ತವೆ.
ಜಾತಿ ವ್ಯವಸ್ಥೆಯ ಸಮಾಜದಲ್ಲಿ ಜನಿಸಿದ ಅವರು, ಅವಮಾನಗಳನ್ನು ಸಹಿಸಿಕೊಂಡು, ಅದೇ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸಿದರು. ಅವರ ಮನೆ ಪರಿಸ್ಥಿತಿ ಕಷ್ಟಕರವಾಗಿದ್ದರೂ, 30ಕ್ಕೂ ಹೆಚ್ಚು ಪದವಿಗಳನ್ನು ಪಡೆದು, “ಬಡತನ ಶಾಶ್ವತವಲ್ಲ; ಶಿಕ್ಷಣವೇ ಶಾಶ್ವತ” ಎಂಬ ಸಂದೇಶವನ್ನು ನೀಡಿದರು.
ನನ್ನ ಜೀವನದಲ್ಲಿ ಕೆಲವೊಮ್ಮೆ ಏನೂ ಸಾಧ್ಯವಿಲ್ಲ ಎಂಬ ಭಾವನೆ ಬಂದಾಗ, ನಾನು ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ಆಗ ನನಗೆ ಆತ್ಮವಿಶ್ವಾಸ ಮೂಡುತ್ತದೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸನ್ನು ಮನಸ್ಸಿನೊಳಗೆ ಮೂಡಿಸಿದೆ. ಇಂತಹ ಮಹಾನ್ ವ್ಯಕ್ತಿಯ ವ್ಯಕ್ತಿತ್ವವೇ ನನ್ನ ಜೀವನದ ಆದರ್ಶ.
–ರವಿ ಕೊಪ್ಪಳ
ಪತ್ರಿಕೋದ್ಯಮ ವಿದ್ಯಾರ್ಥಿ ಆಳ್ವಾಸ್ ಕಾಲೇಜು (ಮೂಡುಬಿದರೆ)
ಹೆಚ್ಚಿನ ವಿಶೇಷ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

