ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿದ್ದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ದಾಖಲಿಸಿದ್ದಾರೆ. ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಅವರ ಪುತ್ರ ಉಮೇಶ್ ಮೇಟಿ ತಂದೆಯ ಪರಂಪರೆಯನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್.ವೈ. ಮೇಟಿ ಅವರ ನಿಧನದ ನಂತರ ಅನುಕಂಪ ಮತ್ತು ಅಭಿವೃದ್ಧಿಯ ಆಧಾರದ ಮೇಲೆ ಕಾಂಗ್ರೆಸ್ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಿತ್ತು. ಮೊದಲ ಬಾರಿಗೆ ಕಣಕ್ಕಿಳಿದ ಉಮೇಶ್ ಮತದಾರರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ವೀರಣ್ಣ ಚರಂತಿಮಠ ಅವರು ಅಂತಿಮ ಸುತ್ತಿನ ಮತ ಎಣಿಕೆಯಲ್ಲಿ ಹಿನ್ನಡೆ ಅನುಭವಿಸಿ ಸೋಲೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಶೃಂಗೇರಿ ಅಖಾಡದಲ್ಲಿ ಬಿಜೆಪಿಗೆ ಭರ್ಜರಿ ಜಯ: 52 ಮತಗಳ ಅಂತರದಿಂದ ಡಿ.ಎನ್. ಜೀವರಾಜ್ ವಿಜೇತ!
ಈ ಗೆಲುವಿನ ಮೂಲಕ ಬಾಗಲಕೋಟೆ ಕ್ಷೇತ್ರವು ಮತ್ತೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಸಾಬೀತಾಗಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ನಗರದಾದ್ಯಂತ ವಿಜಯೋತ್ಸವ ಆಚರಿಸಿದರು.

ಬಾಗಲಕೋಟೆ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಈ ಬಾರಿ ಅತಿದೊಡ್ಡ ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಫಲಿತಾಂಶದ ಪ್ರಮುಖ ಅಂಕಿ-ಅಂಶಗಳು ಇಲ್ಲಿವೆ:
ಕಾಂಗ್ರೆಸ್ ಅಭ್ಯರ್ಥಿ (ವಿಜೇತ): ಉಮೇಶ್ ಮೇಟಿ ಅವರು ಒಟ್ಟು 97,941 ಮತಗಳನ್ನು ಪಡೆದಿದ್ದಾರೆ.
ಬಿಜೆಪಿ ಅಭ್ಯರ್ಥಿ: ವೀರಣ್ಣ ಚರಂತಿಮಠ್ ಅವರು 76,075 ಮತಗಳನ್ನು ಗಳಿಸಿದ್ದಾರೆ.
ಗೆಲುವಿನ ಅಂತರ: ಉಮೇಶ್ ಮೇಟಿ ಅವರು 21,866 ಮತಗಳ ಭರ್ಜರಿ ಅಂತರದಿಂದ ಜಯಭೇರಿ ಬಾರಿಸಿದ್ದಾರೆ
ಈ ಹಿಂದೆ 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು 15,934 ಮತಗಳ ಅಂತರದಿಂದ ಗೆದ್ದಿದ್ದೇ ಈ ಕ್ಷೇತ್ರದ ಈವರೆಗಿನ ಅತಿದೊಡ್ಡ ಲೀಡ್ ಆಗಿತ್ತು. ಈಗ ಉಮೇಶ್ ಮೇಟಿ ಅವರು ಆ ದಾಖಲೆಯನ್ನು ಅಳಿಸಿ ಹಾಕಿ, ಬಾಗಲಕೋಟೆ ಕ್ಷೇತ್ರದ ಇತಿಹಾಸದಲ್ಲೇ ಅತ್ಯಧಿಕ ಮತಗಳ ಅಂತರದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

