ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬೆಂಗಳೂರಿನ ಸಂಧ್ಯಾ ಎಂಬ ಮಹಿಳೆಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ರಜೆ ಹಿನ್ನೆಲೆಯಲ್ಲಿ ಕಟೀಲು ದೇವಸ್ಥಾನದಲ್ಲಿ ಭಕ್ತರ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ, ಮಲ್ಲಿಗೆಯಂಗಡಿ ಜಂಕ್ಷನ್‌ನಲ್ಲಿ ಭಾರಿ ವಾಹನಗಳನ್ನು ಕಿನ್ನಿಗೋಳಿ ಕಡೆಗೆ ತಿರುಗಿಸಲಾಗುತ್ತಿತ್ತು. ಲಘು ವಾಹನಗಳಿಗೆ ಮಾತ್ರ ದೇವಸ್ಥಾನದತ್ತ ಸಂಚರಿಸಲು ಅವಕಾಶ ನೀಡಲಾಗಿತ್ತು.

ಈ ವೇಳೆ ಮಧ್ಯಾಹ್ನ ಟೆಂಪೋ ಟ್ರಾವೆಲರ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ, ತಮ್ಮ ವಾಹನವನ್ನು ದೇವಸ್ಥಾನದತ್ತ ಬಿಡುವಂತೆ ಒತ್ತಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಂಟ್ವಾಳ: ಡ್ರಗ್ಸ್ ಸಾಗಿಸುತ್ತಿದ್ದ ಬೋಳಂತೂರಿನ ಆರೋಪಿಗಳು ಮಂಚಿಯಲ್ಲಿ ಅರೆಸ್ಟ್

ಪೊಲೀಸರು ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದರೂ, ಮಹಿಳೆ ರಸ್ತೆ ಮಧ್ಯದಲ್ಲಿ ನಿಂತು ಸಂಚಾರಕ್ಕೆ ಅಡ್ಡಿ ಉಂಟುಮಾಡಿದಳು ಎಂದು ದೂರಿನಲ್ಲಿ ಹೇಳಲಾಗಿದೆ.
ಬಜ್ಪೆ ಪೊಲೀಸ್ ಠಾಣೆಯ ಚಿದಾನಂದ ಕಟೇ ನೀಡಿದ ದೂರಿನಲ್ಲಿ, ಕರ್ತವ್ಯದಲ್ಲಿದ್ದ ಯೂನಿಫಾರ್ಮ್ ಧರಿಸಿದ ಪೊಲೀಸರನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿ, ಅವರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾಳೆ ಎಂದು ಉಲ್ಲೇಖಿಸಲಾಗಿದೆ.
ತಮ್ಮನ್ನು ಬೆಂಗಳೂರಿನಿಂದ ಬಂದವರು ಎಂದು ಪರಿಚಯಿಸಿಕೊಂಡ ಮಹಿಳೆ, “ನಾವು ನಿಮಗೆ ಪಾಠ ಕಲಿಸುತ್ತೇವೆ, ನಿಮ್ಮ ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ” ಎಂದು ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ದಗಳನ್ನು ಬಳಸಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

