ಲಕ್ನೋ ಬೌಲರ್ಸ್ ದಂಡಿಸಿದ ರೋಹಿತ್, ರಿಕೆಲ್ಟನ್; ಮುಂಬೈಗೆ ಭರ್ಜರಿ ಗೆಲುವು

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 47ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ತಂಡದ ಪರ ನಿಕೋಲಸ್ ಪೂರನ್ 63 ರನ್‌ಗಳ ಸ್ಫೋಟಕ ಆಟವಾಡಿದರೆ, ಮಿಚೆಲ್ ಮಾರ್ಷ್ 44, ಹಿಮ್ಮತ್ ಸಿಂಗ್ ಅಜೇಯ 40 ಹಾಗೂ ಐಡೆನ್ ಮಾರ್ಕ್ರಾಮ್ ಅಜೇಯ 31 ರನ್‌ಗಳನ್ನು ಸೇರಿಸಿದರು. ಮುಂಬೈ ಪರ ಕಾರ್ಬಿನ್ ಬಾಷ್ 2 ವಿಕೆಟ್ ಪಡೆದರೆ, ಅಲ್ಲಾ ಗಜನ್ಫರ್, ವಿಲ್ ಜ್ಯಾಕ್ಸ್ ಮತ್ತು ರಘು ಶರ್ಮಾ ತಲಾ 1 ವಿಕೆಟ್ ಕಬಳಿಸಿದರು.

229 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ, ಕೇವಲ 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ತಂಡದ ಗೆಲುವಿಗೆ ರಯಾನ್ ರಿಕೆಲ್ಟನ್ ಹಾಗೂ ರೋಹಿತ್ ಶರ್ಮಾ ಪ್ರಮುಖ ಕಾರಣರಾದರು.

ಇದನ್ನೂ ಓದಿ: IPL: ಪಂಜಾಬ್‌ಗೆ ಸೋಲು, ರೋಚಕ ಪಂದ್ಯ ಗೆದ್ದ ಗುಜರಾತ್

ರಿಕೆಲ್ಟನ್ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 83 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ರೋಹಿತ್ ಶರ್ಮಾ 44 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್‌ಗಳೊಂದಿಗೆ 84 ರನ್ ಬಾರಿಸಿದರು. ಇವರ ಜೋಡಿ ಮುಂಬೈಗೆ ಸುಲಭ ಜಯದ ದಾರಿಯನ್ನು ತೋರಿಸಿತು.

ಇತರ ಆಟಗಾರರಲ್ಲಿ ತಿಲಕ್ ವರ್ಮಾ 11, ಸೂರ್ಯಕುಮಾರ್ ಯಾದವ್ 12, ನಮನ್ ಧೀರ್ ಅಜೇಯ 23 ಹಾಗೂ ವಿಲ್ ಜ್ಯಾಕ್ಸ್ ಅಜೇಯ 10 ರನ್‌ಗಳನ್ನು ಗಳಿಸಿದರು. ಲಕ್ನೋ ಪರ ಎಂ. ಸಿದ್ಧಾರ್ಥ್ 2 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ 1 ವಿಕೆಟ್ ಪಡೆದರು.

ಒಟ್ಟಾರೆ, ರೋಹಿತ್–ರಿಕೆಲ್ಟನ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿತು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ