ಹೆಚ್‌ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು.
ತಂಡದ ಪರ ಅಜೇಯ ಇನ್ನಿಂಗ್ಸ್ ಆಡಿದ ವೆಂಕಟೇಶ್ ಅಯ್ಯರ್ 73 ರನ್ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ 58 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ದೇವದತ್ ಪಡಿಕ್ಕಲ್ 45 ರನ್ ಬಾರಿಸಿದರೆ, ಟಿಮ್ ಡೇವಿಡ್ 28 ಹಾಗೂ ಜಾಕೋಬ್ ಬೆಥೆಲ್ 11 ರನ್ ಸೇರಿಸಿದರು. ಪಂಜಾಬ್ ಪರ ಹರ್‌ಪ್ರೀತ್ ಬ್ರಾರ್ 2 ವಿಕೆಟ್ ಪಡೆದರೆ, ಯಜುವೇಂದ್ರ ಚಹಲ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಕಬಳಿಸಿದರು.
223 ರನ್‌ಗಳ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಪ್ರಿಯಾಂಶ್ ಆರ್ಯ ಶೂನ್ಯಕ್ಕೆ ಔಟಾದರೆ, ಪ್ರಭ್‌ಸಿಮ್ರನ್ ಸಿಂಗ್ 2 ಮತ್ತು ನಾಯಕ ಶ್ರೇಯಸ್ ಅಯ್ಯರ್ 1 ರನ್‌ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ: IPL: ಫಿನ್ ಅಲೆನ್ ಬಿರುಸಿನ ಬ್ಯಾಟಿಂಗ್‌ಗೆ ಗುಜರಾತ್ ಬೌಲರ್‌ಗಳು ಬೆರಗು! ಕೋಲ್ಕತ್ತಾಗೆ 29 ರನ್ ಜಯ
ಆದರೂ ಮಧ್ಯಮ ಕ್ರಮಾಂಕದಲ್ಲಿ ಕೂಪರ್ ಕಾನೋಲಿ 37, ಮಾರ್ಕಸ್ ಸ್ಟೊಯಿನಿಸ್ 37 ಹಾಗೂ ಸೂರ್ಯಾಂಶ್ ಶೆಡ್ಜ್ 35 ರನ್ ಗಳಿಸಿ ಹೋರಾಟ ಮುಂದುವರಿಸಿದರು.
ಕೊನೆಯಲ್ಲಿ ಶಶಾಂಕ್ ಸಿಂಗ್ 56 ರನ್‌ಗಳ ಹೋರಾಟದ ಅರ್ಧಶತಕ ಸಿಡಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಜ್ಮತುಲ್ಲಾ ಒಮರ್ಜೈ 14 ಹಾಗೂ ಹರ್‌ಪ್ರೀತ್ ಬ್ರಾರ್ ಅಜೇಯ 5 ರನ್ ಗಳಿಸಿದರು.
ಪಂಜಾಬ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿ 23 ರನ್‌ಗಳ ಸೋಲು ಅನುಭವಿಸಿತು.
ಆರ್‌ಸಿಬಿ ಪರ ರಾಸಿಖ್ ಸಲಾಂ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದರು. ರೊಮಾರಿಯೊ ಶೆಫರ್ಡ್, ಸುಯಾಶ್ ಶರ್ಮಾ ಹಾಗೂ ಜೋಶ್ ಹ್ಯಾಜಲ್‌ವುಡ್ ತಲಾ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


