ಶೃಂಗೇರಿ ಜಗದ್ಗುರುಗಳ ಗುರುವಂದನೆ ಕಾರ್ಯಕ್ರಮ ಯಶಸ್ವಿ: ಅಂಬಿಕಾದಲ್ಲಿ ಕೃತಜ್ಞತಾ ಸಭೆ

Ambika Group of Educational Institutions holds thanksgiving meeting in Puttur

ಪುತ್ತೂರು: ಇತ್ತೀಚೆಗೆ ಜರಗಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಮಂಗಳವಾರ ಕೃತಜ್ಞತಾ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗುರುವಂದನಾ ಸಮಿತಿಯ ಅಧ್ಯಕ್ಷ ಚಿದಾನಂದ ಬೈಲಾಡಿ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಜಗದ್ಗುರುಗಳು ಹರ್ಷಚಿತ್ತರಾಗಿದ್ದಾರೆ ಎಂದರು.

ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ವಿವಿಧ ಸಮಿತಿಗಳ ನಡುವಣ ಹೊಂದಾಣಿಕೆ, ಪರಸ್ಪರ ಸಲಹೆ ಸೂಚನೆಗಳು, ಏಕೋದ್ದೇಶದೊಂದಿಗೆ ಕಾರ್ಯನಿರ್ವಹಣೆಯೇ ಮೊದಲಾದ ಸಂಗತಿಗಳು ಯಶಸ್ಸಿನ ತಳಹದಿಗಳೆನಿಸಿವೆ. ಶೃಂಗೇರಿ ಜಗದ್ಗುರುಗಳನ್ನು ನಾಲ್ಕನೇ ಬಾರಿಗೆ ಪುತ್ತೂರಿನ ಮಣ್ಣಿಗೆ ಕರೆತಂದ ಅಂಬಿಕಾ ಸಂಸ್ಥೆಗಳು ಅಭಿನಂದನೆಗೆ ಅರ್ಹ ಎಂದರು.

ತಾಲೂಕು  ಧರ್ಮ ಶಿಕ್ಷಣ ಸಮಿತಿ – ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ, ಎದುರಿಗೆ ಕಾಣಿಸದೆ ಸಾಕಷ್ಟು ಪರಿಶ್ರಮಪಟ್ಟ ಹಲವು ವ್ಯಕ್ತಿಗಳಿದ್ದಾರೆ. ಅತ್ಯುತ್ತಮ ಕಾರ್ಯಕ್ರಮ ಸಂಘಟನೆಗೆ ಇಂತಹ ವ್ಯಕ್ತಿಗಳು ಅನಿವಾರ್ಯ. ಅಂಬಿಕಾ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳ ಸಮರ್ಪಣಾಭಾವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಸಮಾಜದ ವಿವಿಧ ಸಮುದಾಯಗಳಿಂದಲೂ ಪ್ರತಿನಿಧಿಗಳು ಜವಾಬ್ದಾರಿ ವಹಿಸಿಕೊಂಡು ಕಾರ್ಯಕ್ರಮವನ್ನು ದಾಖಲೆಯಾಗಿ ಮಾರ್ಪಡಿಸಿದ್ದಾರೆ ಎಂದರು.

ಇದನ್ನೂ ಓದಿ: ಮಂಗಳೂರಲ್ಲಿ ವಿಚಿತ್ರ ವಿದ್ಯಮಾನ: ಕಾವೂರಿನ ಮೂರು ಮನೆಗಳ ಬಾವಿಯಲ್ಲಿ ದಿಢೀರ್ ಉಕ್ಕಿ ಬಂತು ಡೀಸೆಲ್! ಪ್ರಯೋಗಾಲಯದ ವರದಿ ಕಂಡು ಜನ ಶಾಕ್!

ಗುರುವಂದನಾ ಸಮಿತಿಯ ಸಮಘಟನಾ ಕಾರ್ಯದರ್ಶಿ ದಿನೇಶ್ ಜೈನ್ ಮಾತನಾಡಿ, ಧರ್ಮಾಭ್ಯುದಯವ ವಿದ್ಯಾಥಿಗಳು ಪ್ರಸ್ತುತಪಡಿಸಿದ ಸಮರ್ಪಣಮ್ ಕಾರ್ಯಕ್ರಮ ಜಗದ್ಗುರುಗಳ ಮನಸ್ಸನ್ನು ಗೆದ್ದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗಿ ಧರ್ಮ ಶಿಕ್ಷಣವನ್ನು ಪ್ರಸಾರ ಮಾಡುವ ಅಗತ್ಯವಿದೆ. ಸಾಧ್ಯವಾದಲ್ಲಿ ಪ್ರತಿವರ್ಷವೂ ಧರ್ಮಾಭ್ಯುದಯದ ವಾರ್ಷಿಕೋತ್ಸವಕ್ಕೆ ಶೃಂಗೇರಿ ಜಗದ್ಗುರುಗಳನ್ನು ಆಮಂತ್ರಿಸಿ ಕಾರ್ಯಕ್ರಮ ಆಯೋಜಿಸುವ ಬಗೆಗೆ ಯೋಚನೆ ನಡೆಸಬೇಕು ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಜಗದ್ಗುರುಗಳ ಅನುಗ್ರಹದಿಂದ ಎಲ್ಲವೂ ಅತ್ಯಂತ ಸಮರ್ಪಕವಾಗಿ ನಡೆದಿದೆ. ಇದೇ ಮೊದಲಬಾರಿಗೆ ಶೃಂಗೇರಿ ಜಗದ್ಗುರುಗಳು ಬಲ್ನಾಡು ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯಕ್ಕೆ ಆಗಮಿಸಿ, ಚಂಡಿಕಾಹೋಮದ ಪೂರ್ಣಾಹುತಿಯನ್ನು ನಡೆಸಿಕೊಟ್ಟಿರುವುದು ಚರಿತ್ರಾರ್ಹ ವಿಚಾರವಾಗಿ ಮೂಡಿಬಂದಿದೆ. ಜಗದ್ಗುರುಗಳ ದರ್ಶನದಿಂದ ಎಲ್ಲರೂ ಪಾವನರಾಗಿದ್ದೇವೆ ಎಂದು ಹೇಳಿದರು.

ಗುರುವಂದನಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಚಿದಾನಂದ ಬೈಲಾಡಿಯವರು ಸುಬ್ರಮಣ್ಯ ನಟ್ಟೋಜ ಅವರಿಗೆ ಹಸ್ತಾಂತರಿಸಿದರು. ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಗುರುವಂದನಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಧರ್ಮಾಭ್ಯುದಯದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು