Breaking News

ವ್ಯವಸ್ಥಿತ ಅಧ್ಯಯನ ಮತ್ತು ಸೂಕ್ತ ಯೋಜನೆಯಿಂದ ಯಶಸ್ಸು ಸಾಧ್ಯ: ಪುತ್ತೂರಿನಲ್ಲಿ ಡಾ. ರಾಜೇಶ್ ಅಭಯ

ಪುತ್ತೂರು: ಪ್ರತಿದಿನದ ಅಭ್ಯಾಸ, ಕಲಿತ ವಿಷಯಗಳ ಪುನರಾವರ್ತಿತ ಪಠಣ ಮತ್ತು ಸರಿಯಾದ ಅಧ್ಯಯನ ಕ್ರಮವು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಯ ಭಯವನ್ನು ಕಳೆಯುತ್ತದೆ ಎಂದು ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಶ್ ಪ್ರತಿಪಾದಿಸಿದ್ದಾರೆ.

ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ “ಮಾನಸಿಕ ಒತ್ತಡವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯುವ ಗುಟ್ಟು: ಸ್ಮಾರ್ಟ್ ಸ್ಟಡಿ” ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಅತಿಯಾದ ಅಥವಾ ತೀರ ಕಡಿಮೆ ಒತ್ತಡ ಎರಡೂ ಕಾರ್ಯಕ್ಷಮತೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಪರೀಕ್ಷೆಗೆ ಉಳಿದಿರುವ ಸಮಯವನ್ನು ಲೆಕ್ಕ ಹಾಕಿ ಅಧ್ಯಯನದ ಯೋಜನೆ ರೂಪಿಸಬೇಕು. ನಿದ್ರೆ ಕಳೆದುಕೊಂಡು ಓದುವುದರಿಂದ ನೆನಪಿನ ಶಕ್ತಿ ಕುಂಠಿತಗೊಂಡು ಮಾನಸಿಕ ಆರೋಗ್ಯ ಕೆಡಬಹುದು.

ಇದನ್ನೂ ಓದಿ: ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಪುತ್ತೂರಿನ ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜು ವಿದ್ಯಾರ್ಥಿಗಳು ಆಯ್ಕೆ

ಕಣ್ಣಿಗೆ ಕಾಣುವುದೆಲ್ಲವನ್ನೂ ಓದುವುದಕ್ಕಿಂತ ಪರೀಕ್ಷೆಗೆ ಅಗತ್ಯವಿರುವ ಪ್ರಮುಖ ವಿಷಯಗಳನ್ನು ಗುರುತಿಸಿ ಆಳವಾಗಿ ಓದುವುದೇ ನಿಜವಾದ ಸ್ಮಾರ್ಟ್ ಸ್ಟಡಿ. ಆಲೋಚನೆ ಮತ್ತು ವರ್ತನೆಯಲ್ಲಿ ತೀವ್ರ ಬದಲಾವಣೆ, ವಾಸ್ತವಕ್ಕೆ ವಿರುದ್ಧವಾದ ಭಾವನೆಗಳು ಕಂಡುಬಂದರೆ ತಕ್ಷಣವೇ ಮನೋವೈದ್ಯರನ್ನು ಸಂಪರ್ಕಿಸಬೇಕು. ಮಾನಸಿಕ ಸಮಸ್ಯೆ ದೌರ್ಬಲ್ಯವಲ್ಲ, ಸೂಕ್ತ ಚಿಕಿತ್ಸೆಯಿಂದ ಪರಿಹಾರ ಸಾಧ್ಯ.

ನಿಯಮಿತ ವ್ಯಾಯಾಮ, ಅಗತ್ಯವಿದ್ದಾಗ ಶಿಕ್ಷಕರ ನೆರವು ಪಡೆಯುವುದು ಮತ್ತು ಇತರರೊಂದಿಗೆ ತನ್ನನ್ನು ಹೋಲಿಸಿಕೊಳ್ಳದಿರುವುದು ಒತ್ತಡ ನಿವಾರಣೆಗೆ ಸಹಕಾರಿ. ಕಾರ್ಯಕ್ರಮದ ವೇದಿಕೆಯಲ್ಲಿ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ. ಎಸ್. ಹಾಗೂ ಉಪ ಪ್ರಾಂಶುಪಾಲ ಪ್ರದೀಪ್ ಕೆ. ವೈ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಗಾಯನಾ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *