ಜಾಗತಿಕ ವೇದಿಕೆಯಲ್ಲಿ ಬೆಂಗಳೂರು ವಾಚ್ ಕಂಪನಿಯ ಕಮಾಲ್: ‘ಪೆನಿನ್ಸುಲಾ ಕಾರ್ಬನ್’ ವಾಚ್‌ಗೆ ಜಿನೇವಾದ ಅತ್ಯುನ್ನತ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ

ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರು ಇದೀಗ ಜಾಗತಿಕ ಐಷಾರಾಮಿ ವಾಚ್ ತಯಾರಿಕಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದೆ. ಬೆಂಗಳೂರು ಮೂಲದ ಪ್ರಸಿದ್ಧ ‘ಬೆಂಗಳೂರು ವಾಚ್ ಕಂಪನಿ’ (Bangalore Watch Company) ಜಾಗತಿಕ ವಾಚ್ ತಯಾರಿಕಾ ರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ‘ವಾಚ್ ಜಗತ್ತಿನ ಆಸ್ಕರ್’ ಎಂದೇ ಪರಿಗಣಿಸಲ್ಪಡುವ ‘2026ರ ಗ್ರ್ಯಾಂಡ್ ಪ್ರಿ ಡಿ ಹೊರ್ಲೊಗೆರಿ ಡಿ ಜೆನೆವಾ’ (GPHG) ಪ್ರಶಸ್ತಿ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದೆ.

ಬೆಂಗಳೂರು ವಾಚ್ ಕಂಪನಿಯು ಈ ಜಾಗತಿಕ ಪ್ರಶಸ್ತಿ ರೇಸ್‌ಗೆ ‘ಪೆನಿನ್ಸುಲಾ ಕಾರ್ಬನ್’ ಹೆಸರಿನ ವಿಶೇಷ ವಾಚ್‌ ಅನ್ನು ಕಳುಹಿಸಿಕೊಟ್ಟಿದೆ. ವಾತಾವರಣದಲ್ಲಿರುವ ಇಂಗಾಲವನ್ನು ಸೆರೆಹಿಡಿದು, ಅದನ್ನು ಮರುಬಳಕೆ ಮಾಡಿ ವಾಚ್‌ನ ಡಯಲ್ ಅನ್ನು ಸಿದ್ಧಪಡಿಸಲಾಗಿದೆ. ಕಂಪನಿಯು ತನ್ನದೇ ಆದ ಪೇಟೆಂಟ್ ಹೊಂದಿರುವ ಪ್ರತ್ಯೇಕ ReforgeCarbon™ ಎಂಬ ವಿಶೇಷ ಮೆಟೀರಿಯಲ್ ಹಾಗೂ ತಂತ್ರಜ್ಞಾನವನ್ನು ಬಳಸಿ ಈ ಅದ್ಭುತ ವಿನ್ಯಾಸವನ್ನು ರೂಪಿಸಿದೆ.

ಇದನ್ನೂ ಓದಿ: ಜಿಯೋ ಪ್ಲಾಟ್‌ಫಾರ್ಮ್ಸ್ ತ್ರೈಮಾಸಿಕ ಬಂಪರ್ ಲಾಭ: 45,961 ಕೋಟಿ ರೂ.ಗೆ ಏರಿದ ಆದಾಯ
ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಬನ್ ಅನ್ನು ಐಷಾರಾಮಿ ವಾಚ್‌ನ ಅಂಗವಾಗಿಸಿ ವಿನ್ಯಾಸಗೊಳಿಸಿರುವುದು ಜಾಗತಿಕ ವಾಚ್ ತಜ್ಞರ ಗಮನ ಸೆಳೆದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಜೆನೆವಾದಲ್ಲಿ ನಡೆಯುವ ಜಿಪಿಎಚ್‌ಜಿ (GPHG) ಪ್ರಶಸ್ತಿಯು ಪ್ರಪಂಚದಾದ್ಯಂತದ ಅತ್ಯುತ್ತಮ ಹಾಗೂ ನವೀನ ವಿನ್ಯಾಸದ ವಾಚ್‌ಗಳನ್ನು ಗುರುತಿಸಿ ಗೌರವಿಸುತ್ತದೆ. ಸ್ವಿಟ್ಜರ್‌ಲ್ಯಾಂಡ್ ಮತ್ತು ಯುರೋಪ್‌ನ ಶತಮಾನಗಳ ಇತಿಹಾಸವಿರುವ ದೈತ್ಯ ವಾಚ್ ಕಂಪನಿಗಳ ನಡುವೆ ಭಾರತದ ಯುವ ಬ್ರ್ಯಾಂಡ್ ಒಂದು ಈ ಮಟ್ಟದ ಗೌರವಕ್ಕೆ ಪಾತ್ರವಾಗಿರುವುದು ಭಾರತೀಯ ಉತ್ಪಾದನಾ (Make in India) ಹಾಗೂ ವಿನ್ಯಾಸ ಕ್ಷೇತ್ರಕ್ಕೆ ಸಿಕ್ಕ ಬಹುದೊಡ್ಡ ಗೆಲುವಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ