ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಹಾಗೂ ಸಿನೆಮಾ ಶೈಲಿಯ ಅಪರಾಧ ಕೃತ್ಯ ಬೆಳಕಿಗೆ ಬಂದಿದೆ. ಅಮೆರಿಕನ್ ಕಂಪನಿಯೊಂದರಲ್ಲಿ ಹೂಡಿಕೆ (Investment Deal) ಮಾಡುವ ಆಮಿಷವೊಡ್ಡಿ ಬೆಂಗಳೂರಿನ ಪ್ರಮುಖ ಉದ್ಯಮಿಯೊಬ್ಬರನ್ನು ಗನ್ ಪಾಯಿಂಟ್ನಲ್ಲಿ ಅಪಹರಿಸಿ, ಅವರಿಂದ ಬರೋಬ್ಬರಿ 1.09 ಕೋಟಿ ರೂಪಾಯಿ ನಗದು, ಮೊಬೈಲ್ ಹಾಗೂ ಕಾರನ್ನು ದರೋಡೆ ಮಾಡಿರುವ ಘಟನೆ ದಾಸನಪುರ ಹೋಬಳಿಯ ಕುದುರೆಗೆರೆ ಕಾಲೋನಿ ಬಳಿ ಜೂನ್ 15 ರಂದು ತಡರಾತ್ರಿ ನಡೆದಿದೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಪೊಲೀಸ್ ಎಫ್ಐಆರ್ (FIR) ಪ್ರಕಾರ, ಯಶವಂತಪುರದಲ್ಲಿ ಸ್ನೇಹಿತರೊಂದಿಗೆ ಸೇರಿ ಸ್ಕೂಟರ್ ಡೀಲರ್ಶಿಪ್ ನಡೆಸುತ್ತಿರುವ 41 ವರ್ಷದ ಆರ್.ಐ. ಶಿವಶಂಕರ್ ಎಂಬುವರೇ ವಂಚನೆಗೊಳಗಾದ ಉದ್ಯಮಿ. ಆಂಧ್ರಪ್ರದೇಶ ಮತ್ತು ಹೈದರಾಬಾದ್ ಮೂಲದ ಕೆಲವು ಬಿಸಿನೆಸ್ ಸಂಪರ್ಕಗಳು ಇವರನ್ನು ಸಂಪರ್ಕಿಸಿ, “ಎ.ಎನ್.ಆರ್.ಎಸ್” (American Nuclear Research System) ಎಂಬ ಅಮೆರಿಕನ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಬರುತ್ತದೆ ಎಂದು ನಂಬಿಸಿದ್ದರು.
ಜೂನ್ 12 & 13: ಆರೋಪಿಗಳಾದ ಮೊಹಮ್ಮದ್ ಪರ್ವೇಜ್, ಆಲಿಸ್ ಮತ್ತು ಜಾನ್ಸನ್ ಎಂಬ ಮೂವರು ಬೆಂಗಳೂರಿಗೆ ಬಂದು ಕೊಡಿಗೇಹಳ್ಳಿಯ ಹೋಟೆಲ್ವೊಂದರಲ್ಲಿ ತಂಗಿದ್ದರು. ಜೂನ್ 13 ರಂದು ಇವರು ಉದ್ಯಮಿ ಶಿವಶಂಕರ್ ಅವರಿಂದ ಮೊದಲ ಕಂತಾಗಿ 35 ಲಕ್ಷ ರೂಪಾಯಿ ಪಡೆದುಕೊಂಡಿದ್ದರು.
ಜೂನ್ 15 ರ ಸ್ಕೆಚ್: ಜೂನ್ 15 ರಂದು ಮತ್ತೆ ಶಿವಶಂಕರ್ ಅವರನ್ನ ಸಂಪರ್ಕಿಸಿದ ಆರೋಪಿಗಳು, ತಮ್ಮ ಬಳಿ 74 ಲಕ್ಷ ರೂಪಾಯಿ ಹಣ ಸಿದ್ಧವಿದೆ, ಅದನ್ನು ಪಡೆದುಕೊಳ್ಳಲು ಯಲಹಂಕದ ಬಳಿ ಬರುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಶಿವಶಂಕರ್ ತಮ್ಮ ಚಾಲಕ ಚೇತನ್ ಜೊತೆ ಹೊಂಡಾ ಅಮೇಜ್ ಕಾರಿನಲ್ಲಿ ತೆರಳಿದ್ದಾರೆ.
ಜೂನ್ 15 ರ ತಡರಾತ್ರಿ 11:05ರ ಸುಮಾರಿಗೆ ಕುದುರೆಗೆರೆ ಕಾಲೋನಿಯ ಗಣೇಶ ದೇವಸ್ಥಾನದ ಬಳಿ ಶಿವಶಂಕರ್ ಅವರ ಕಾರನ್ನು ಎಸ್ಯುವಿ (SUV) ವಾಹನವೊಂದರಲ್ಲಿ ಬಂದ ಗ್ಯಾಂಗ್ ಅಡ್ಡಗಟ್ಟಿದೆ. ವಾಹನದಿಂದ ಇಳಿದ ನಾಲ್ವರು ದುಷ್ಕರ್ಮಿಗಳು, ಗನ್ ತೋರಿಸಿ ಜೀವ ಬೆದರಿಕೆ ಹಾಕಿ ಶಿವಶಂಕರ್ ಹಾಗೂ ಅವರ ಡ್ರೈವರ್ನನ್ನು ಬಲವಂತವಾಗಿ ತಮ್ಮ ವಾಹನಕ್ಕೆ ಎಳೆದುಕೊಂಡಿದ್ದಾರೆ. ಕಾರಿನ ಡಿಕ್ಕಿಯಲ್ಲಿದ್ದ 74 ಲಕ್ಷ ರೂ. ನಗದು ದೋಚಿದ್ದಷ್ಟೇ ಅಲ್ಲದೆ, ಗ್ಯಾಂಗ್ನ ಇತರ ಮೂವರು ಆರೋಪಿಗಳು ಡ್ರೈವರ್ನನ್ನು ಶಿವಶಂಕರ್ ಅವರ ಮನೆಗೆ ಕರೆದೊಯ್ದು, ಅವರ ಪತ್ನಿಯ ಹೆದರಿಸಿ ಮತ್ತೊಂದು ಕಂತಿನ 35 ಲಕ್ಷ ರೂಪಾಯಿಯನ್ನು ಪೀಕಿದ್ದಾರೆ.
ಇದನ್ನೂ ಓದಿ: ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ಜೂ.29ಕ್ಕೆ ಉದ್ಘಾಟನೆ
ಒಟ್ಟು 1.09 ಕೋಟಿ ರೂಪಾಯಿ ಹಣವನ್ನು ದೋಚಿದ ದರೋಡೆಕೋರರ ಗ್ಯಾಂಗ್, ಉದ್ಯಮಿಯ ಮೊಬೈಲ್ ಫೋನ್ ಮತ್ತು ಕಾರನ್ನು ಕಿತ್ತುಕೊಂಡು ಅವರನ್ನ ನೆಲಮಂಗಲದ ಬಳಿ ಕೈಬಿಟ್ಟು ಪರಾರಿಯಾಗಿದ್ದಾರೆ. ಹೋಗುವ ಮುನ್ನ “ಪೊಲೀಸರಿಗೆ ದೂರು ನೀಡಿದರೆ ಮುಗಿಸಿಬಿಡುತ್ತೇವೆ” ಎಂದು ಹೆದರಿಸಿದ್ದರು. ನಂತರ ಶಿವಶಂಕರ್ ಕುಟುಂಬದವರೊಂದಿಗೆ ಚರ್ಚಿಸಿ ಜೂನ್ 16 ರಂದು ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಏಳು ಮಂದಿ ಸಶಸ್ತ್ರ ದರೋಡೆಕೋರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


