ಬೆಂಗಳೂರು : ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ವಸುದೇವ ಕುಟುಂಬ’ದ ಚಿತ್ರೀಕರಣದ ವೇಳೆ ಇಂದು ಭಾರಿ ಹೈಡ್ರಾಮಾ ನಡೆದಿದೆ. ಧಾರಾವಾಹಿಯ ನಿರ್ಮಾಪಕರು ಕಳೆದ ಕೆಲವು ತಿಂಗಳುಗಳಿಂದ ಸಂಭಾವನೆ ನೀಡಿಲ್ಲ ಎಂದು ಆರೋಪಿಸಿ, ನಟಿಯರಾದ ಹಂಸ ಮತ್ತು ಚೈತ್ರಾ ಅವರು ನಿರ್ಮಾಪಕರನ್ನು ನಡುರಸ್ತೆಯಲ್ಲೇ ತಡೆದು ಪೇಮೆಂಟ್ ಕೇಳಿದ ಘಟನೆ ನಡೆದಿದೆ.
ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ ಮತ್ತು ಹಿರಿಯ ನಟ ಅವಿನಾಶ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿರುವ ಈ ಧಾರಾವಾಹಿಯ ತಂಡದಲ್ಲಿ ಕಳೆದ ಕೆಲವು ಸಮಯದಿಂದ ಅಸಮಾಧಾನ ಸ್ಫೋಟಗೊಂಡಿದೆ. ಕಳೆದ ಕೆಲವು ತಿಂಗಳುಗಳಿಂದ ಕಲಾವಿದರಿಗೆ ಮತ್ತು ತಾಂತ್ರಿಕ ವರ್ಗದವರಿಗೆ ಸರಿಯಾಗಿ ಸಂಭಾವನೆ ಪಾವತಿಯಾಗಿಲ್ಲ.

ಚಿತ್ರೀಕರಣದ ಸಮಯದಲ್ಲಿ ಸರಿಯಾದ ಆಹಾರ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ ಎಂಬ ಗಂಭೀರ ಆರೋಪಗಳನ್ನು ಕಲಾವಿದರು ಮಾಡಿದ್ದಾರೆ. ಇಂದು (ಮೇ 01) ಸಂಭಾವನೆ ವಿಚಾರವಾಗಿ ಜಗಳ ತಾರಕಕ್ಕೇರಿದ್ದು, ನಟಿಯರಾದ ಹಂಸ ಮತ್ತು ಚೈತ್ರಾ ಅವರು ನಿರ್ಮಾಪಕರ ವಾಹನವನ್ನು ಅಡ್ಡಗಟ್ಟಿ ಹಣ ಪಾವತಿಸುವಂತೆ ಆಗ್ರಹಿಸಿದ್ದಾರೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ನಿರ್ಮಾಪಕರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆಯಿಂದಾಗಿ ಧಾರಾವಾಹಿಯ ಭವಿಷ್ಯದ ಬಗ್ಗೆ ಪ್ರೇಕ್ಷಕರಲ್ಲಿ ಮತ್ತು ಉದ್ಯಮದಲ್ಲಿ ಚರ್ಚೆ ಶುರುವಾಗಿದೆ. ಸದ್ಯ ಸ್ಟಾರ್ ಸುವರ್ಣ ವಾಹಿನಿ ಅಥವಾ ನಿರ್ಮಾಪಕ ಮಂಡಳಿಯಿಂದ ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ಹೊರಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

