ನವದೆಹಲಿ: ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಸಿಎಂ ಬದಲಾವಣೆ ಹಾಗೂ ‘ಸೆಪ್ಟೆಂಬರ್ ಕ್ರಾಂತಿ’ಯ ಊಹಾಪೋಹಗಳಿಗೆ ಕೊನೆಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೆರೆ ಎಳೆದಿದ್ದಾರೆ. ನವದೆಹಲಿಯಲ್ಲಿ ಇಂದು (ಮೇ 26) ನಡೆದ ಸರಣಿ ಹೈ-ಪ್ರೊಫೈಲ್ ಸಭೆಗಳ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳೆಲ್ಲವೂ ಕೇವಲ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರದಿಂದಲೇ ಹೊರನಡೆದಿರುವುದು ರಾಜಕೀಯ ವಲಯದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಸಭೆಯಲ್ಲಿ ಚರ್ಚೆಯಾಗಿದ್ದು ಕೇವಲ ಎಲೆಕ್ಷನ್ ಅಷ್ಟೇ!: ವೇಣುಗೋಪಾಲ್
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಂದು ಅತ್ಯಂತ ಪ್ರಮುಖ ಸಭೆ ಜರುಗಿತು. ಈ ಉನ್ನತ ಮಟ್ಟದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆ.ಸಿ. ವೇಣುಗೋಪಾಲ್ ಭಾಗವಹಿಸಿದ್ದರು.
ಸಭೆಯ ವಿವರ ನೀಡಿದ ವೇಣುಗೋಪಾಲ್, “ಈ ಸಭೆಯಲ್ಲಿ ಕೇವಲ ಮುಂಬರುವ ವಿಧಾನ ಪರಿಷತ್ ಚುನಾವಣೆ ಮತ್ತು ರಾಜ್ಯಸಭಾ ಚುನಾವಣೆಯ ಕಾರ್ಯತಂತ್ರಗಳ ಬಗ್ಗೆ ಮಾತ್ರ ಸುದೀರ್ಘವಾಗಿ ಚರ್ಚಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಹೊರತುಪಡಿಸಿ ನಾಯಕತ್ವ ಬದಲಾವಣೆಯಂತಹ ಮತ್ಯಾವ ಬಾಕಿ ವಿಷಯಗಳೂ ಚರ್ಚೆಗೆ ಬಂದಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಉಳಿದೆಲ್ಲಾ ವಿಚಾರಗಳು ಕೇವಲ ಊಹೆ ಮಾತ್ರ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬ್ಯಾರಿ ಸಮುದಾಯವು ಮಾಜಿ ಸಿಎಂ ಬಂಗಾರಪ್ಪನವರಿಗೆ ರಾಜಕೀಯ ಶಕ್ತಿ ನೀಡಿತ್ತು: ಸಚಿವ ಮಧು ಬಂಗಾರಪ್ಪ ಶ್ಲಾಘನೆ!
ಹಾಗಾದರೆ ಸಿದ್ದರಾಮಯ್ಯ ಬೇಸರಕ್ಕೆ ಕಾರಣವೇನು?
ಹೈಕಮಾಂಡ್ ನಾಯಕರು ಎಲ್ಲವೂ ನಾರ್ಮಲ್ ಆಗಿದೆ ಎಂದು ಹೇಳುತ್ತಿರುವುದರ ನಡುವೆಯೂ ಸಭೆಯ ಇನ್‌ಸೈಡ್ ಮಾಹಿತಿ ಬೇರೆಯದೇ ಕಥೆ ಹೇಳುತ್ತಿದೆ. ಸಭೆ ಮುಗಿಸಿ ಹೊರಡುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮುಖದಲ್ಲಿ ಸ್ಪಷ್ಟ ಬೇಸರ ಎದ್ದು ಕಾಣುತ್ತಿತ್ತು. ರಾಜಕೀಯ ಮೂಲಗಳ ಪ್ರಕಾರ, ಕೇವಲ ಚುನಾವಣಾ ಚರ್ಚೆಯಷ್ಟೇ ಅಲ್ಲದೆ ರಾಜ್ಯ ರಾಜಕೀಯದ ‘ಸಂಥಿಂಗ್ ಸಂಥಿಂಗ್’ ಆಂತರಿಕ ಬೆಳವಣಿಗೆಗಳು ಮತ್ತು ಸಚಿವರ ದೆಹಲಿ ಭೇಟಿಯ ಕುರಿತು ಹೈಕಮಾಂಡ್ ನಾಯಕರು ಕೆಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಚುನಾವಣಾ ನೆಪದಲ್ಲಿ ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಹೈಕಮಾಂಡ್ ಕೆಲವು ಖಡಕ್ ಸಂದೇಶಗಳನ್ನು ರವಾನಿಸಿರುವುದೇ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದ್ದು, ದೆಹಲಿ ಮೀಟಿಂಗ್‌ನ ಅಸಲಿ ಆಟ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಹಿರಂಗವಾಗಲಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


