ದೆಹಲಿ: ದೇಶಾದ್ಯಂತ ಹಣದುಬ್ಬರದ ಬಿಸಿಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ಮತ್ತೆ ಬಿಗ್ ಶಾಕ್ ನೀಡಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ ಲೀಟರ್‌ಗೆ 2.61 ರೂಪಾಯಿ ಮತ್ತು 2.71 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದು ಕೇವಲ ಕಳೆದ 11 ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಇಂಧನ ದರದಲ್ಲಿ ಮಾಡಿರುವ ಭರೋಬ್ಬರಿ ನಾಲ್ಕನೇ ಏರಿಕೆಯಾಗಿದೆ.
ದೆಹಲಿಯಲ್ಲೇ 100ರ ಗಡಿ ದಾಟಿದ ಪೆಟ್ರೋಲ್!:
ಪರಿಷ್ಕೃತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ದೇಶದ ರಾಜಧಾನಿ ಹೊಸದೆಹಲಿಯಲ್ಲೇ ಲೀಟರ್ ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ. ಇಂದಿನ ಹೊಸ ದರದ ಪ್ರಕಾರ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 102.12 ರೂಪಾಯಿ ತಲುಪಿದ್ದರೆ, ಲೀಟರ್ ಡೀಸೆಲ್ ಬೆಲೆ 95.20 ರೂಪಾಯಿ ತಲುಪಿದೆ. ಇನ್ನುಳಿದ ಮೆಟ್ರೋ ಸಿಟಿಗಳು ಹಾಗೂ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಈ ದರ ಇನ್ನು ದುಬಾರಿಯಾಗಲಿದೆ.
11 ದಿನದಲ್ಲಿ ಬರೋಬ್ಬರಿ 7.5 ರೂ. ಹೆಚ್ಚಳ!:
ಕಳೆದ ಮೇ 15ರಿಂದ ತೈಲ ದರ ಪರಿಷ್ಕರಣೆ ಪ್ರಕ್ರಿಯೆ ಪುನರಾರಂಭವಾದ ಕೇವಲ 11 ದಿನಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಒಟ್ಟು 7.5 ರೂಪಾಯಿಗಳಷ್ಟು ದುಬಾರಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ತೈಲ ಕಂಪನಿಗಳ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.
ದರ ಏರಿಕೆಗೆ ಪಶ್ಚಿಮ ಏಷ್ಯಾ ಬಿಕ್ಕಟ್ಟೇ ಕಾರಣ!:
ಈ ದರ ಏರಿಕೆ ಕುರಿತು ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ (ONGC) ಮತ್ತು ಬಿಪಿಸಿಎಲ್ (BPCL) ಅಧಿಕಾರಿಗಳು ಮಾಹಿತಿ ನೀಡಿದ್ದು, “ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ (West Asia) ಉಂಟಾಗಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಜಾಗತಿಕ ಕಚ್ಚಾ ತೈಲ ದರಗಳ ಏರಿಕೆಯೇ ಇಂಧನ ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದಿಂದ ತೈಲ ಕಂಪನಿಗಳು ಅನುಭವಿಸುತ್ತಿರುವ ಭಾರಿ ನಷ್ಟವನ್ನು ಸರಿದೂಗಿಸಲು ಈ ದರ ಪರಿಷ್ಕರಣೆ ಅನಿವಾರ್ಯವಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಇಂಧನ ದರ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಲಿದ್ದು, ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕ ಮೂಡಿಸಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


