ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯು ಅತ್ಯಂತ ಅದ್ಧೂರಿಯಾಗಿ ಅಂತ್ಯಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಾಂಪಿಯನ್ ಆಗಿ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಟೂರ್ನಿ ಮುಗಿಯುತ್ತಿದ್ದಂತೆ ಪ್ರತಿಯೊಂದು ಫ್ರಾಂಚೈಸಿಗಳು ತಮ್ಮ ತಂಡದ ಪ್ಲಸ್ ಮತ್ತು ಮೈನಸ್ ಅಂಶಗಳ ಕುರಿತು ಪರಾಮರ್ಶೆ ನಡೆಸುತ್ತಿದ್ದು, ಮುಂದಿನ ಸೀಸನ್‌ಗೆ ಮಾಡಬೇಕಾದ ಬದಲಾವಣೆಗಳ ಬಗ್ಗೆ ಚರ್ಚಿಸುತ್ತವೆ. ಆದರೆ, ಇದರ ನಡುವೆಯೇ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಲ್ಲಿ ಕೇಳಿಬಂದಿರುವ ಗಂಭೀರ ಆರೋಪವೊಂದು ಇಡೀ ಐಪಿಎಲ್ ಕ್ರಿಕೆಟ್ ವಲಯದಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದೀಗ ಒಳಗಿನಿಂದಲೇ ದೊಡ್ಡ ಆಘಾತ ಎದುರಾಗಿದೆ. ಹೈದರಾಬಾದ್ ತಂಡದ ಸ್ಟಾರ್ ವಿದೇಶಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ಅವರು ತಂಡದ ಮಾಲೀಕರಾದ ಕಾವ್ಯ ಮಾರನ್ (Kavya Maran) ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಖಾಸಗಿ ಪಾಡ್‌ಕಾಸ್ಟ್ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಲಿಯಾಮ್ ಲಿವಿಂಗ್‌ಸ್ಟೋನ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಡಳಿತ ಮಂಡಳಿಯ ವಿರುದ್ಧ ಗಂಭೀರ ಆಪಾದನೆ ಮಾಡಿದ್ದಾರೆ. “ಹೈದರಾಬಾದ್ ತಂಡದ ಪ್ರತಿಯೊಂದು ನಿರ್ಧಾರದಲ್ಲೂ ಮಾಲೀಕರ ಹಸ್ತಕ್ಷೇಪ ಇರುತ್ತದೆ. ಕೇವಲ ಮ್ಯಾನೇಜ್‌ಮೆಂಟ್ ಅಷ್ಟೇ ಅಲ್ಲ, ಪಂದ್ಯದ ದಿನ ಕಣಕ್ಕಿಳಿಯುವ ಅಂತಿಮ 11 ಆಟಗಾರರ (Playing 11) ಆಯ್ಕೆಯಲ್ಲೂ ಸಹ ಮಾಲೀಕರಾದ ಕಾವ್ಯ ಮಾರನ್ ಅವರ ಹಸ್ತಕ್ಷೇಪ ಇರುತ್ತದೆ,” ಎಂದು ಲಿವಿಂಗ್‌ಸ್ಟೋನ್ ನೇರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: IPL: ಐಪಿಎಲ್ 2026 ಸೀಸನ್ ಪ್ರಶಸ್ತಿಗಳು, ವೈಭವ್ ಸೂರ್ಯವಂಶಿಗೆ ಸಿಂಹಪಾಲು
ಸಾಮಾನ್ಯವಾಗಿ ಐಪಿಎಲ್ ತಂಡಗಳಲ್ಲಿ ಆಟಗಾರರ ಆಯ್ಕೆ ಹಾಗೂ ತಂತ್ರಗಾರಿಕೆಯನ್ನು ಕೋಚ್ ಮತ್ತು ನಾಯಕ ನಿರ್ಧಾರ ಮಾಡುತ್ತಾರೆ. ಆದರೆ, ಲಿವಿಂಗ್‌ಸ್ಟೋನ್ ಅವರ ಈ ಇತ್ತೀಚಿನ ಹೇಳಿಕೆಯು ಫ್ರಾಂಚೈಸಿ ಮಾಲೀಕರು ಕ್ರಿಕೆಟ್ ನಿರ್ಧಾರಗಳಲ್ಲೂ ಮೂಗು ತೂರಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ. ಆರ್‌ಸಿಬಿ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಹೈದರಾಬಾದ್ ತಂಡದ ಈ ಆಂತರಿಕ ಜಗಳದ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ಈ ಆರೋಪಕ್ಕೆ ಸನ್‌ರೈಸರ್ಸ್ ಹೈದರಾಬಾದ್ ಮ್ಯಾನೇಜ್‌ಮೆಂಟ್ ಅಥವಾ ಕಾವ್ಯ ಮಾರನ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


