ಕಲ್ಲಡ್ಕ ಶ್ರೀರಾಮ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸನಾತನ ಸಂಸ್ಕೃತಿಯ ಸ್ಪರ್ಶದೊಂದಿಗೆ ಬೀಳ್ಕೊಡುಗೆ

kalladka-sriram-college-farewell-ceremony-2026

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ 2025-26ನೇ ಸಾಲಿನ ಅಂತಿಮ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪ ಪ್ರದಾನ ಕಾರ್ಯಕ್ರಮವು ಮಹಾವಿದ್ಯಾಲಯದ ಆಜಾದ್ ಸಭಾಂಗಣದಲ್ಲಿ ಭಾವಪೂರ್ಣವಾಗಿ ನಡೆಯಿತು.

ಸನಾತನ ಭಾರತೀಯ ಸಂಸ್ಕೃತಿಯ ಮೌಲ್ಯಗಳ ಆಧಾರದಲ್ಲಿ ಆಯೋಜಿಸಲಾದ ಈ ವಿಶೇಷ ಕಾರ್ಯಕ್ರಮವು ದೀಪ ಪ್ರಜ್ವಲನೆ ಹಾಗೂ ಸರಸ್ವತಿ ವಂದನೆಯೊಂದಿಗೆ ಆರಂಭಗೊಂಡಿತು. ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕ ಧಾರಣೆ ಮಾಡಿಸಿ, ಸಿಹಿ ನೀಡಿ ಗೌರವಿಸಲಾಯಿತು.

ಈ ವರ್ಷ ಗುಜರಾತಿನ ಪ್ರಸಿದ್ಧ ಸೋಮನಾಥೇಶ್ವರ ದೇವಸ್ಥಾನದ ಪುನರ್‌ನಿರ್ಮಾಣದ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಶಿವಲಿಂಗಕ್ಕೆ ಹಣತೆ ಹಚ್ಚುವ ಮೂಲಕ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಇದೇ ವೇಳೆ ವಿದ್ಯಾರ್ಥಿಗಳು ವಿದ್ಯಾಕೇಂದ್ರದೊಂದಿಗಿನ ತಮ್ಮ ಅನುಭವಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭವಿಷ್ಯದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೆಳಗಿದ ದೀಪವನ್ನು ಹಸ್ತಾಂತರಿಸುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಸಾಂಕೇತಿಕವಾಗಿ ವರ್ಗಾಯಿಸಿದರು.

ಇದನ್ನೂ ಓದಿ: ದ.ಕ. ರೈತರಿಗೆ ಗನ್ ಲೈಸನ್ಸ್ ನವೀಕರಣ ಕಂಟಕ; ತುರ್ತು ಕ್ರಮಕ್ಕೆ ಡಿಜಿಪಿಗೆ ಸಂಸದ ಚೌಟ ಪತ್ರ

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ, ಭಾರತವು ಜ್ಞಾನದ ಅಪಾರ ಪರಂಪರೆಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಪ್ರತಿಯೊಬ್ಬರೂ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಬದ್ಧರಾಗಬೇಕು ಎಂದು ಹೇಳಿದರು.

“ಸಮಾಜದಲ್ಲಿ ಅನೇಕ ಕೆಟ್ಟ ವಿಚಾರಗಳಿದ್ದರೂ, ಅವುಗಳ ನಡುವೆ ಒಳ್ಳೆಯದನ್ನು ಆಯ್ಕೆ ಮಾಡುವ ವಿವೇಕ, ಧೈರ್ಯ ಮತ್ತು ಎಚ್ಚರಿಕೆಯಿಂದ ಬದುಕಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ” ಎಂದು ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜುವೆಲ್ಲರ್ಸ್ ಅಸೋಸಿಯೇಷನ್ ಬೆಂಗಳೂರು ಅಧ್ಯಕ್ಷ ಹಾಗೂ ಉದ್ಯಮಿ ಡಾ. ಚೇತನ್ ಕುಮಾರ್ ಮೆಹ್ತಾ ಅವರು ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಣ ಮತ್ತು ಸಂಸ್ಕಾರ ಪರಂಪರೆಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಈ ಮೌಲ್ಯಗಳ ಆಧಾರದ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಗಳೂರಿನ ಖ್ಯಾತ ವೈದ್ಯರು ಹಾಗೂ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ಬೆಂಗಳೂರಿನ ಶೆಲ್ಟರ್ಸ್ ಮತ್ತು ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೂಪೇಶ್ ಕುಮಾರ್, ಇನ್‌ಸ್ಟಿಟ್ಯೂಶನ್ ಆಫ್ ಜ್ಯುವೆಲ್ಲರಿ ಸ್ಟಡೀಸ್ ಪ್ರಾಂಶುಪಾಲ ಪ್ರೊ. ಡಾ. ಸೂರ್ಯ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ರಾಷ್ಟ್ರ ಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ಡಾ. ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಿಇಒ ಹಾಗೂ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ನೆನಪಿನ ಕಾಣಿಕೆಯನ್ನು ವಿದ್ಯಾಸಂಸ್ಥೆಗೆ ಅರ್ಪಿಸಿದರು.

ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬಿಸಿಎ ವಿದ್ಯಾರ್ಥಿ ಜಯಸೂರ್ಯ ಕಾರ್ಯಕ್ರಮ ನಿರೂಪಿಸಿದರೆ, ಪ್ರಥಮ ಬಿಕಾಂ ವಿದ್ಯಾರ್ಥಿನಿ ಕು. ಪ್ರಣಮ್ಯಾ ವಂದಿಸಿದರು. ಕು. ಅಕ್ಷತಲಕ್ಷ್ಮೀ ಅವರು ವೈಯಕ್ತಿಕ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು