ಕೋಲಾರ: ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ ಆಂಬ್ಯುಲೆನ್ಸ್ನಲ್ಲಿ ಬಂದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಇಡೀ ರಾಜ್ಯದ ಗಮನ ಸೆಳೆದಿದ್ದ ಕೆಜಿಎಫ್ ತಾಲ್ಲೂಕಿನ ಚಿನ್ನನಾಗನಹಳ್ಳಿ ಗ್ರಾಮದ ಬಾಲಕಿ ಕುಸುಮ ಮತ್ತೆ ಸುದ್ದಿಯಲ್ಲಿದ್ದಾಳೆ. ಚಿಕಿತ್ಸೆಯ ವೆಚ್ಚ ಭರಿಸಲಾಗದೆ ಕುಸಿಯುತ್ತಿದ್ದ ಬಾಲಕಿಯ ಕುಟುಂಬಕ್ಕೆ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಸರೆಯಾಗಿದ್ದಾರೆ.
ಅಪಘಾತದ ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದ ಕುಸುಮ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿತ್ತು. ಹೀಗಾಗಿ ಆಕೆಯನ್ನು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಖಾಸಗಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ಹಣವಿಲ್ಲದೆ ತಂದೆ ಶಂಕರಪ್ಪ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಮಗಳ ಜೀವ ಉಳಿಸಲು ಬೇರೆ ದಾರಿಯಿಲ್ಲದೆ ಅವರು ತಮ್ಮ ಕಿಡ್ನಿ ಮಾರಾಟ ಮಾಡುವ ಕಠಿಣ ನಿರ್ಧಾರಕ್ಕೆ ಬಂದಿದ್ದರು.

ಈ ವಿಷಯ ತಿಳಿದ ತಕ್ಷಣವೇ ಸ್ಪಂದಿಸಿದ ಮಾಜಿ ಸಚಿವ ಸುರೇಶ್ ಕುಮಾರ್, ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಆರೋಗ್ಯ ಸಚಿವರ ಗಮನಕ್ಕೆ ವಿಷಯ ತಂದಿದ್ದಾರೆ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರೊಂದಿಗೆ ಚರ್ಚಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಸಂಸದ ಕ್ಯಾ. ಚೌಟ ಅವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ

ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ (CM Relief Fund) ಇಂದ ಭರಿಸುವ ಭರವಸೆಯನ್ನು ಸರ್ಕಾರದಿಂದ ಕೊಡಿಸಿದ್ದಾರೆ. ಸರ್ಕಾರದ ಭರವಸೆಯ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಬಾಲಕಿಗೆ ಚಿಕಿತ್ಸೆ ಮುಂದುವರಿಸಿದ್ದು, ಸದ್ಯ ಕುಸುಮ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಕುಸುಮಳ ಈ ಹಿಂದಿನ ಛಲದ ಬಗ್ಗೆ ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆಕೆಯನ್ನು ಶೈಕ್ಷಣಿಕ ಸ್ಪೂರ್ತಿ ಎಂದು ಕರೆದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

