ನವದೆಹಲಿ: ನಿಶ್ಚಿತ ವರ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಹಲವು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಪೊಲೀಸರು ನಡೆಸುತ್ತಿರುವ ತನಿಖೆಯ ಪ್ರಕಾರ, ಆರೋಪಿ ಸಿಯಾ ಗೋಯಲ್ ತನ್ನ ಪ್ರಿಯಕರ ಚೇತನ್ ಚೌಧರಿಯೊಂದಿಗೆ ಸೇರಿ ಹಲವು ತಿಂಗಳ ಹಿಂದೆಯೇ ಹತ್ಯೆಯ ಸಂಚು ರೂಪಿಸಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ತನಿಖಾ ಮೂಲಗಳ ಪ್ರಕಾರ, ಚೇತನ್ ತನ್ನ ವೃತ್ತಿಜೀವನದಲ್ಲಿ ಸ್ಥಿರತೆ ಸಾಧಿಸಲು ಇನ್ನೂ ಮೂರು ವರ್ಷಗಳ ಕಾಲ ಮದುವೆಯಾಗಲು ಸಾಧ್ಯವಿಲ್ಲ ಎಂದು ಸಿಯಾಗೆ ತಿಳಿಸಿದ್ದ ಎನ್ನಲಾಗಿದೆ. ಆದರೆ ಸಿಯಾ ಮತ್ತು ಕೇತನ್ ಅವರ ವಿವಾಹವು ಇದೇ ವರ್ಷದ ನವೆಂಬರ್‌ನಲ್ಲಿ ನಿಗದಿಯಾಗಿತ್ತು.

ಇದರಿಂದಾಗಿ ಕೇತನ್‌ರನ್ನು ಹತ್ಯೆ ಮಾಡಿದರೆ ಕುಟುಂಬ ಶೋಕದಲ್ಲಿ ಮುಳುಗುವ ಕಾರಣ ಮುಂದಿನ ಕೆಲವು ವರ್ಷಗಳವರೆಗೆ ಮದುವೆಯ ವಿಚಾರ ಮುಂದುವರಿಯುವುದಿಲ್ಲ ಎಂಬ ಉದ್ದೇಶದಿಂದ ಸಂಚು ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸಿಯಾ ಮತ್ತು ಚೇತನ್ ಈ ವರ್ಷದ ಫೆಬ್ರವರಿಯಲ್ಲೇ ಹತ್ಯೆಯ ಯೋಜನೆ ರೂಪಿಸಲು ಆರಂಭಿಸಿದ್ದರು. ಹತ್ಯೆ ನಡೆಸುವ ವಿಧಾನಗಳ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ್ದಲ್ಲದೆ, ಮಹಾರಾಷ್ಟ್ರದ ಪುಣೆ ಸಮೀಪದ ಲೋಹಗಡ್ ಕೋಟೆಗೆ ಮುಂಚಿತವಾಗಿ ತೆರಳಿ ಘಟನೆಯನ್ನು ಹೇಗೆ ನಡೆಸಬೇಕು ಎಂಬುದನ್ನು ಅಭ್ಯಾಸ ಮಾಡಿದ್ದರು ಎನ್ನಲಾಗಿದೆ.
ಇದಲ್ಲದೆ, ಘಟನೆ ಬಳಿಕ ಪೊಲೀಸರ ವಿಚಾರಣೆಗೆ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆಯೂ ಇಬ್ಬರೂ ಮುಂಚಿತವಾಗಿಯೇ ತಯಾರಿ ನಡೆಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಅನುಮಾನ ಬಾರದಂತೆ ವೇಷ ಬದಲಿಸಿಕೊಂಡು ಕೃತ್ಯ ಎಸಗುವ ಯೋಜನೆಯೂ ರೂಪಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ಇಬ್ಬರೂ ತಮ್ಮ ಮೊಬೈಲ್‌ಗಳಲ್ಲಿದ್ದ ಚಾಟ್‌ಗಳು ಹಾಗೂ ರಿಸೈಕಲ್ ಬಿನ್‌ನ ಮಾಹಿತಿಯನ್ನು ಅಳಿಸಿ ಹಾಕಿರುವುದು ಪತ್ತೆಯಾಗಿದ್ದು, ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ
ಜೂನ್ 14ರಂದು ಸಿಯಾ ಕೇತನ್ ಅವರನ್ನು ಕೋಟೆಗೆ ಕರೆದೊಯ್ದು ಕಂದಕಕ್ಕೆ ತಳ್ಳಲು ಯತ್ನಿಸಿದ್ದಳು. ಆದರೆ ಅವರು ಪೊದೆಯನ್ನು ಹಿಡಿದು ಬದುಕುಳಿದಿದ್ದರು ಎಂದು ತನಿಖೆ ಹೇಳಿದೆ.
ಬಳಿಕ ಹಾವನ್ನು ಕಂಡಂತೆ ನಾಟಕವಾಡಿ ಅನುಮಾನ ದೂರ ಮಾಡಿದ ಸಿಯಾ, ಮತ್ತೊಮ್ಮೆ ಕೋಟೆಗೆ ಬರಲು ಕೇತನ್ ಅವರನ್ನು ಮನವೊಲಿಸಿದ್ದಳು. ಈ ವೇಳೆ ಚೇತನ್ ಕೂಡ ಸ್ಥಳಕ್ಕೆ ಆಗಮಿಸಿದ್ದು, ಇಬ್ಬರೂ ಸೇರಿ ಕೇತನ್ ಅವರನ್ನು ಹಿಂದಿನಿಂದ ತಳ್ಳಿ ಕಂದಕಕ್ಕೆ ಬೀಳಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಲ್ಲದೆ, ಮೊದಲ ಎರಡು ಯೋಜನೆಗಳು ವಿಫಲವಾದರೆ ಅನುಷ್ಠಾನಗೊಳಿಸಲು ಮತ್ತೊಂದು ಪರ್ಯಾಯ ಯೋಜನೆಯನ್ನೂ (Plan C) ಆರೋಪಿಗಳು ಸಿದ್ಧಪಡಿಸಿದ್ದರು ಎಂದು ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ವಿಧಿವಿಜ್ಞಾನ ವರದಿ ಹಾಗೂ ಇತರೆ ಸಾಕ್ಷ್ಯಾಧಾರಗಳ ನಿರೀಕ್ಷೆಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

