ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಪತಿಯೊಬ್ಬರನ್ನು ಪತ್ನಿಯೇ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಹಾಗೂ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಮೊದಲು ಪತಿಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ (Datura Poison) ಬೆರೆಸಿ ಕೊಲ್ಲಲು ಯತ್ನಿಸಿದ ಪತ್ನಿ, ಆತ ಆ ವಿಷದ ಪ್ರಭಾವದಿಂದ ಬದುಕುಳಿದಿದ್ದರಿಂದ ಕಡೆಗೆ ಕತ್ತು ಹಿಸುಕಿ ಸಾಯಿಸಿರುವ ಕರಾಳ ಸತ್ಯ ಬಯಲಾಗಿದೆ.
ಈ ದಿಗ್ಭ್ರಮೆ ಮೂಡಿಸುವ ಘಟನೆಯು ಮೈಸೂರು ಜಿಲ್ಲಾದ್ಯಂತ ಭಾರೀ ಆತಂಕ ಹಾಗೂ ಚರ್ಚೆಗೆ ಗ್ರಾಸವಾಗಿದೆ. ಪತಿಯನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ಸಂಚು ಹೂಡಿದ್ದ ಪತ್ನಿ, ಆತ ತಿನ್ನುವ ಇಡ್ಲಿಯಲ್ಲಿ ಮಾರಕ ದತ್ತೂರಿ ಬೀಜದ ಪುಡಿಯನ್ನು ಬೆರೆಸಿ ಕೊಟ್ಟಿದ್ದಾಳೆ. ಆದರೆ, ದುರಾದೃಷ್ಟವಶಾತ್ ಅಥವಾ ಅದೃಷ್ಟವಶಾತ್ ಪತಿ ಆ ಇಡ್ಲಿ ತಿಂದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಸಿದ್ಧಪಡಿಸಿದ ಸಂಚು ವಿಫಲವಾಗಿದೆ.
ಇದನ್ನೂ ಓದಿ: Crime : ಪತ್ನಿಯನ್ನು ಹೂತ ಜಾಗದಲ್ಲೇ ನಾಯಿಯ ಶವವನ್ನು ಹೂತು ಯಾಮಾರಿಸಿದ ಪಾಪಿ ಪತಿ
ದತ್ತೂರಿ ಬೀಜದ ವಿಷದಿಂದ ಪತಿ ಸಾವನ್ನಪ್ಪಿಲ್ಲ ಎಂಬುದು ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಪತ್ನಿ, ತನ್ನದೇ ಕೈಗಳಿಂದ ಪತಿಯ ಕತ್ತು ಹಿಸುಕಿ ಅಸುನೀಗುವಂತೆ ಮಾಡಿದ್ದಾಳೆ. ವಿಷಯ ತಿಳಿದ ತಕ್ಷಣವೇ ಹುಣಸೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ ಮಹಜರು ನಡೆಸಿದ್ದಾರೆ. ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹ, ವೈಷಮ್ಯ ಅಥವಾ ಇತರೆ ಯಾವುದೇ ಅಕ್ರಮ ಸಂಬಂಧಗಳು ಈ ಕೊಲೆಗೆ ಕಾರಣವಾಗಿರಬಹುದೇ ಎಂಬ ಕೋನದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆರೋಪಿ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

