“ಪ್ರೇಯಸಿ ಜತೆ ಸಂಬಂಧ ಬೆಳೆಸಿ, ತಾಯಿಯನ್ನಾಗಿಸಿ ಕೈಬಿಡುವುದು ತಪ್ಪು”: ಯುವಕರಿಗೆ ರಾಜ್ಯಪಾಲೆ ಕಿವಿಮಾತು

ಲಕ್ನೋ : ಯುವಜನರು ತಮ್ಮ ಪ್ರಣಯ ಸಂಬಂಧಗಳ (Romantic Relationships) ಜವಾಬ್ದಾರಿಯನ್ನು ತಾವೇ ಹೊರಬೇಕು ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ (Anandiben Patel) ಖಡಕ್ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯೊಬ್ಬರಿಗೆ ಮಗುವಿಗೆ ಜನ್ಮ ನೀಡಿದ ಬಳಿಕ ಅವರನ್ನು ನذ್ವಧರಿಸಿ ಅಥವಾ ಕೈಬಿಟ್ಟು ಹೋಗುವುದು ಅತ್ಯಂತ ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಲಕ್ನೋದ ಮಹರ್ಷಿ ಇನ್ಫರ್ಮೇಷನ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಗುರುವಾರ (ಅಕ್ಟೋಬರ್ 22) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಈ ಹೇಳಿಕೆಯು ಈಗ ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

“ಗೆಳತಿಯನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ನೀವು ಗೆಳತಿಯನ್ನು ಮಾಡಿಕೊಂಡರೆ ಆಕೆಯೊಂದಿಗೆ ಮದುವೆಯೂ ಆಗಬೇಕು. ಯಾವುದೇ ಯುವತಿ ಜತೆ ಸಂಬಂಧ ಬೆಳೆಸಿ, ಆಕೆಯನ್ನು ತಾಯಿಯನ್ನಾಗಿಸಿದ ಬಳಿಕ ಆಕೆಯನ್ನು ನಡುಹಾದಿಯಲ್ಲಿ ಕೈಬಿಡುವುದು ಸಂಪೂರ್ಣ ತಪ್ಪು” ಎಂದು ರಾಜ್ಯಪಾಲೆ ಖಾರವಾಗಿ ನುಡಿದರು. ಯುವಕರು ಯಾವುದೇ ಬಾಂಧವ್ಯ ಅಥವಾ ಬದ್ಧತೆಗೆ ಒಳಗಾಗುವ ಮುನ್ನ ಮೊದಲು ಸ್ವಾವಲಂಬಿಗಳಾಗಬೇಕು (Self-reliant). ಆರ್ಥಿಕ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಹೊಣೆಗಾರಿಕೆಯನ್ನು ಅರಿತುಕೊಂಡು ಹೆಜ್ಜೆ ಇಡಬೇಕು ಎಂದು ಅವರು ಯುವ ಸಮೂಹಕ್ಕೆ ಕಿವಿಮಾತು ಹೇಳಿದರು.

ಇದನ್ನೂ ಓದಿ: ದೇಶದ ಚುಕ್ಕಾಣಿ ಸಂತರ ಕೈಸೇರಲಿದೆ, ಮುಂದಿನ ಪ್ರಧಾನಿ ಸಾಧು-ಸಂತರು: ದೇವರಗುಡ್ಡ ಕಾರ್ಣಿಕ

ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಸಂಬಂಧಗಳು ಮತ್ತು ಮದುವೆಯ ವಿಚಾರದಲ್ಲಿ ಕಟ್ಟುನಿಟ್ಟಿನ ನಿಲುವು ಹೊಂದಿರುವುದು ಹೊಸದಲ್ಲ. ಕಳೆದ 2025ರ ಅಕ್ಟೋಬರ್‌ನಲ್ಲಿ ಬಲ್ಲಿಯಾ ಮತ್ತು ವಾರಣಾಸಿಯಲ್ಲಿ ನಡೆದ ವಿವಿ ಘಟಿಕೋತ್ಸವಗಳಲ್ಲಿ ಮಾತನಾಡಿದ್ದ ಅವರು, ಲಿವ್-ಇನ್ ಸಂಬಂಧಗಳ (Live-in Relationships) ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇಂತಹ ಸಂಬಂಧಗಳ ಪರಿಣಾಮವಾಗಿ ಅನಾಥಾಶ್ರಮಗಳ ಸ್ಥಿತಿ ಹೇಗಿದೆ ಎಂಬುದನ್ನು ಯುವತಿಯರು ಅರ್ಥಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ