ಮೃತಪಟ್ಟ ಆನಂದ-ಸರೋಜಾ ಆತ್ಮಗಳಿಗೆ ಅದ್ಧೂರಿ ‘ಪ್ರೇತ ವಿವಾಹ’; ತುಳುನಾಡಿನ ಸಂಪ್ರದಾಯದಂತೆ ದೋಷ ನಿವಾರಣೆಗೆ ‘ಕುಲೆತ ಮದಿಮೆ’

ಪುತ್ತೂರು : ಕರಾವಳಿ ಭಾಗದ ವಿಶಿಷ್ಟ ಆಚರಣೆಗಳು ಮತ್ತು ದೈವಾರಾಧನೆಗೆ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಬಾರಿಕೆ ಎಂಬಲ್ಲಿ ಇತ್ತೀಚೆಗೆ ಅತ್ಯಂತ ಅಪರೂಪದ ‘ಪ್ರೇತ ವಿವಾಹ’ (ತುಳುವಿನಲ್ಲಿ ‘ಕುಲೆತ ಮದಿಮೆ’) ನೆರವೇರಿದೆ. ಹಲವು ವರ್ಷಗಳ ಹಿಂದೆ ಅವಿವಾಹಿತರಾಗಿಯೇ ಮೃತಪಟ್ಟಿದ್ದ ಆನಂದ ಮತ್ತು ಸರೋಜಾ ಎಂಬುವವರ ಆತ್ಮಗಳಿಗೆ ಸದ್ಗತಿ ಸಿಗಲಿ ಮತ್ತು ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿಭಿನ್ನ ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕುಟುಂಬದ ಕಷ್ಟಗಳಿಗೆ ಸಿಕ್ಕಿತು ಜ್ಯೋತಿಷ್ಯದ ಪರಿಹಾರ!:

Advertisement

ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಮದುವೆ ತಡೆಯಾಗುವುದು, ಸಂತಾನ ಭಾಗ್ಯದ ಕೊರತೆ ಸೇರಿದಂತೆ ಸಾಲು ಸಾಲು ಕಷ್ಟಗಳು ಎದುರಾಗುತ್ತಿದ್ದವು. ಈ ಸಮಸ್ಯೆಗಳ ಮೂಲ ಕಾರಣವನ್ನು ತಿಳಿಯಲು ಕುಟುಂಬಸ್ಥರು ಜ್ಯೋತಿಷಿಗಳ ಸಲಹೆಯಂತೆ ‘ಪ್ರಶ್ನಾ ಚಿಂತನೆ’ ನಡೆಸಿದ್ದರು. ಈ ವೇಳೆ, ಅವಿವಾಹಿತರಾಗಿ ಮೃತಪಟ್ಟ ಆನಂದ ಅವರ ಆತ್ಮವು ಅತೃಪ್ತವಾಗಿದ್ದು, ಇದೇ ಕಾರಣಕ್ಕೆ ಕುಟುಂಬಕ್ಕೆ ಪಿತೃ ದೋಷ ತಟ್ಟಿದೆ ಎಂಬುದು ತಿಳಿದುಬಂದಿತ್ತು. ಈ ದೋಷ ಪರಿಹಾರಕ್ಕಾಗಿ ಮೃತ ಆನಂದನಿಗೆ ಆತನ ಸೋದರ ಸಂಬಂಧದ ಮಾವನ ಮಗಳು, ದಿವಂಗತ ಸರೋಜಾ ಅವರೊಂದಿಗೆ ವಿವಾಹ ಮಾಡಲು ಹಿರಿಯರು ನಿರ್ಧರಿಸಿದರು.

ಪ್ರೇತ ವಿವಾಹ ಪ್ರಕ್ರಿಯೆಯಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಧರ್ಮಪಾಲ ಶೇಣಿ ಅವರು ಈ ವಿವಾಹದ ಪೌರೋಹಿತ್ಯ ವಹಿಸಿದ್ದರು. ಎರಡೂ ಕುಟುಂಬದ ಸದಸ್ಯರು ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ಜವಾಬ್ದಾರಿ ಹೊತ್ತು ಪಾಲ್ಗೊಂಡಿದ್ದರು. ಸಾಮಾನ್ಯ ಮದುವೆಯಂತೆಯೇ ಈ ಪ್ರೇತ ವಿವಾಹದಲ್ಲೂ ಮೊದಲು ಹುಡುಗಿ ನೋಡುವ ಶಾಸ್ತ್ರ, ನಿಶ್ಚಿತಾರ್ಥ (ತಾಂಬೂಲ ಬದಲಾಯಿಸುವುದು) ಹಾಗೂ ಮದರಂಗಿ ಶಾಸ್ತ್ರಗಳನ್ನು ಅತ್ಯಂತ ಶ್ರದ್ಧೆಯಿಂದ ನಡೆಸಲಾಯಿತು.

ಮದುವೆಯ ದಿನ ಮದುಮಗ ಮತ್ತು ಮದುಮಗಳಿಗೆ ಹೊಸ ಬಟ್ಟೆಗಳನ್ನು ತರಲಾಗಿತ್ತು. ಆರಂಭದಲ್ಲಿ ಕರಾವಳಿಯ ಸಾಂಪ್ರದಾಯಿಕ ‘ಪೂ ಸೀರೆ’ (ಹೂವಿನ ಸೀರೆ) ಬದಲಿಸುವ ಕಾರ್ಯ ನಡೆಯಿತು. ತದನಂತರ, ಮಾನವನ ತಲೆಯ ಗಾತ್ರದ ಎರಡು ಮಣ್ಣಿನ ಪಾತ್ರೆಗಳಿಗೆ ಗಂಡು ಮತ್ತು ಹೆಣ್ಣಿನ ರೂಪ ಬರುವಂತೆ ಕಣ್ಣು, ಬಾಯಿಗಳನ್ನು ರಚಿಸಿ ಸಿದ್ಧಪಡಿಸಲಾಯಿತು.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಕಾಮೆಂಟ್: 7 ಪ್ರಕರಣಗಳ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು

ಈ ಮಣ್ಣಿನ ಪ್ರೇತ ರೂಪಗಳಿಗೆ ಶಾಸ್ತ್ರೋಕ್ತವಾಗಿ ಧಾರೆ ಎರೆದು, ಮಾಂಗಲ್ಯ ಧಾರಣೆ (ತಾಳಿ ಕಟ್ಟುವುದು) ಮಾಡಿಸಲಾಯಿತು. ವಿವಾಹದ ನಂತರ ಈ ಬೊಂಬೆಗಳನ್ನು ಹೊಸ ದಂಪತಿಗಳಂತೆ ಮನೆ ಒಳಗೆ ಕೊಂಡೊಯ್ದು ಗೃಹಪ್ರವೇಶದ ಕಟ್ಟುಕಟ್ಟಳೆಗಳನ್ನು ಪೂರೈಸಲಾಯಿತು. ಕೊನೆಯಲ್ಲಿ ಮದುವೆಗೆ ಬಂದಿದ್ದ ಬಂಧು-ಮಿತ್ರರಿಗೆ ಭರ್ಜರಿ ಕರಾವಳಿ ಶೈಲಿಯ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ವಿಶಿಷ್ಟ ಮದುವೆ ಈಗ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *