ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಮಾನವೀಯತೆಯನ್ನೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಆಕಸ್ಮಿಕವಾಗಿ ಮಹಿಳೆಯೊಬ್ಬರಿಗೆ ಚೆಂಡು (Cricket Ball) ತಗುಲಿದ ಕಾರಣಕ್ಕೆ, ಇಬ್ಬರು ಮುಗ್ಧ ಅಪ್ರಾಪ್ತ ಬಾಲಕರನ್ನು ಶಾಲೆಯ ಕಬ್ಬಿಣದ ಕಿಟಿಕಿಗೆ ಹಗ್ಗದಿಂದ ಕಟ್ಟಿಹಾಕಿ ಚಪ್ಪಲಿ ಹಾಗೂ ಕೈಗಳಿಂದ ಕ್ರೂರವಾಗಿ ಥಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಘಟನೆಯು ಜೂನ್ 21ರ ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಬಾದಾಮಿ ತಾಲೂಕಿನ ನರೇನೂರು ಎಲ್‌ಟಿ-01 (Narenur LT-01) ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಭವಿಸಿದೆ. ಭಾನುವಾರ ಶಾಲೆಯ ರಜೆ ಇದ್ದ ಕಾರಣ ಗ್ರಾಮದ ಹಲವು ಮಕ್ಕಳು ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬ್ಯಾಟ್ ಮಾಡಿದಾಗ ಆಕಸ್ಮಿಕವಾಗಿ ಹಾರಿಹೋದ ಕ್ರಿಕೆಟ್ ಚೆಂಡು, ಶಾಲೆಯ ಪಕ್ಕದಲ್ಲೇ ಇದ್ದ ಮನೆಯ ಮಹಿಳೆಯೊಬ್ಬರಿಗೆ ತಗುಲಿದೆ.

ಚೆಂಡು ತಗುಲುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಆ ಮಹಿಳೆ, ಆಡುತ್ತಿದ್ದ ಸಣ್ಣ ಮಕ್ಕಳನ್ನು ಮನಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, ಮಕ್ಕಳಿಗೆ ತಕ್ಕ ಪಾಠ ಕಲಿಸಲೇಬೇಕೆಂದು ಸ್ಥಳೀಯ ಕೆಲವು ವ್ಯಕ್ತಿಗಳನ್ನು ಪ್ರಚೋದಿಸಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:Puttur : ಕಳ್ಳತನ್ನ ತಪ್ಪಿಸಲು ಚಪ್ಪಲ್ ಗೆ ಬೀಗದ ಭದ್ರತೆ!
ಮಹಿಳೆಯ ಮಾತಿಗೆ ಮರುಳಾದ ಆರೋಪಿಗಳು, ಕ್ರಿಕೆಟ್ ಆಡುತ್ತಿದ್ದ ಪ್ರಜ್ವಲ್ ಮತ್ತು ಸುಶಾಂತ್ ಎಂಬ ಇಬ್ಬರು ಬಾಲಕರನ್ನು ಬಲವಂತವಾಗಿ ಹಿಡಿದು ತಂದು ಶಾಲೆಯ ಕಬ್ಬಿಣದ ಗ್ರಿಲ್ ಹಾಗೂ ಕಿಟಿಕಿಗೆ ಹಗ್ಗದಿಂದ ಬಿಗಿದು ಕಟ್ಟಿದ್ದಾರೆ. ಬಳಿಕ ಇಡೀ ಗ್ರಾಮಸ್ಥರ ಕಣ್ಣೆದುರೇ ಆ ಮುಗ್ಧ ಮಕ್ಕಳನ್ನು ಕೈ ಹಾಗೂ ಚಪ್ಪಲಿಗಳಿಂದ ತೀವ್ರವಾಗಿ ಥಳಿಸಿ ವಿಕೃತಿ ಮೆರೆದಿದ್ದಾರೆ.
ಮಕ್ಕಳ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಕೆಲವು ಹಿರಿಯರು ಹಾಗೂ ಸ್ಥಳೀಯ ನಿವಾಸಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡು ಮಕ್ಕಳನ್ನು ಹಗ್ಗದಿಂದ ಬಿಡಿಸಿ ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪ್ರಾಪ್ತ ಮಕ್ಕಳ ಮೇಲೆ ನಡೆದಿರುವ ಈ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

