ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಖಾಸಗಿ ಜಾಗಕ್ಕೆ ನುಗ್ಗಿದ್ದನ್ನು ಪ್ರಶ್ನಿಸಿದ್ದಕ್ಕೆ ನಿವೃತ್ತ ಬಿಎಂಟಿಸಿ ಕಂಡಕ್ಟರ್‌ಗೆ ಚಾಕು ಇರಿತ; ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಇಬ್ಬರು ಮಲಯಾಳಿ ಪುಂಡರು ಲಾಕ್

ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಡ್ರಗ್ಸ್ ಅಮಲಿನಲ್ಲಿ ನಿವೃತ್ತ ಬಿಎಂಟಿಸಿ ಕಂಡಕ್ಟರ್ ಮೇಲೆ ಚಾಕು ಇರಿತ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಮಲಯಾಳಿ ಮೂಲದ ಇಬ್ಬರು ಹಲ್ಲೆಕೋರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರುಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯರ ಮೇಲೆ ಹೊರರಾಜ್ಯದ ಕೆಲ ಕಿಡಿಗೇಡಿಗಳ ದರ್ಪ ಹಾಗೂ ಪುಂಡಾಟಿಕೆ ದಿನೇ ದಿನೇ ಮಿತಿಮೀರುತ್ತಿದೆ. ಇತ್ತೀಚೆಗಷ್ಟೇ ನಡೆದ ಕೆಲವು ಅಪರಾಧ ಘಟನೆಗಳ ಬೆನ್ನಲ್ಲೇ, ಈಗ ಡ್ರಗ್ಸ್ ಅಮಲಿನಲ್ಲಿದ್ದ ಮಲಯಾಳಿ ಮೂಲದ ಇಬ್ಬರು ಯುವಕರು ಸ್ಥಳೀಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿರುವ ಆಘಾತಕಾರಿ ಘಟನೆ ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಎರಡನೇ ಹಂತದಲ್ಲಿ (Electronic City Phase 2) ನಡೆದಿದೆ. ಖಾಸಗಿ ಜಾಗಕ್ಕೆ ಅನಧಿಕೃತವಾಗಿ ನುಗ್ಗಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ನಿವೃತ್ತ ಬಿಎಂಟಿಸಿ ಕಂಡಕ್ಟರ್ ಸೇರಿದಂತೆ ಮೂವರ ಮೇಲೆ ಚಾಕು ಹಾಗೂ ಗಾಜಿನ ಬಾಟಲಿಗಳಿಂದ ಹಲ್ಲೆ ನಡೆಸಲಾಗಿದ್ದು, ಸದ್ಯ ಇಬ್ಬರು ಆರೋಪಿಗಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಶುಕ್ರವಾರ ಸಂಜೆ ಎಲೆಕ್ಟ್ರಾನಿಕ್ಸ್ ಸಿಟಿ ಹಂತ-2 ರ ವ್ಯಾಪ್ತಿಯಲ್ಲಿ ಕ್ಯಾಬ್‌ನಲ್ಲಿ ಬಂದಿದ್ದ ಇಬ್ಬರು ಮಲಯಾಳಿ ಯುವಕರು, ಅಲ್ಲಿನ ಖಾಸಗಿ ಜಮೀನೊಂದರ ಒಳಗೆ ಅನಧಿಕೃತವಾಗಿ ಪ್ರವೇಶ ಮಾಡಿದ್ದರು. ಈ ಜಮೀನು ಬಿಎಂಟಿಸಿಯ ನಿವೃತ್ತ ಕಂಡಕ್ಟರ್ ಆಗಿರುವ ರಾಮಚಂದ್ರ ಅವರಿಗೆ ಸೇರಿದ್ದಾಗಿತ್ತು. ತಮ್ಮ ಜಾಗಕ್ಕೆ ಅಪರಿಚಿತರು ಅಕ್ರಮವಾಗಿ ನುಗ್ಗಿದ್ದನ್ನು ಗಮನಿಸಿದ ರಾಮಚಂದ್ರ ಅವರು ಯುವಕರನ್ನು ತಡೆದು, ಒಳಗೆ ಬಂದಿದ್ದರ ಕುರಿತು ಪ್ರಶ್ನಿಸಿದ್ದಾರೆ.

Advertisement

ಮಾದಕ ವಸ್ತುವಿನ (ಡ್ರಗ್ಸ್) ತೀವ್ರ ಅಮಲಿನಲ್ಲಿದ್ದ ಆ ಯುವಕರು ರಾಮಚಂದ್ರ ಅವರೊಂದಿಗೆ ಏಕಾಏಕಿ ವಾಗ್ವಾದಕ್ಕಿಳಿದಿದ್ದಾರೆ. ಮಾತಿನ ಚಕಮಕಿ ತಾರಕಕ್ಕೇರಿದ ಬೆನ್ನಲ್ಲೇ, ಕಿಡಿಗೇಡಿ ಯುವಕರು ತಮ್ಮ ಬಳಿಯಿದ್ದ ಚಾಕು ಹಾಗೂ ಗಾಜಿನ ಬಾಟಲಿಗಳಿಂದ ರಾಮಚಂದ್ರ ಮತ್ತು ಅವರ ಜೊತೆಯಲ್ಲಿದ್ದವರ ಮೇಲೆ ಮನಸೋಇಚ್ಛೆ ಇರಿದು ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಶ್ರೀಕ್ಷೇತ್ರ ಧರ್ಮಸ್ಥಳ, ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಹೇಳಿಕೆ: ಜೂನ್ 30ರ ಒಳಗಾಗಿ ವಿಠ್ಠಲ್ ಗೌಡನನ್ನು ಕೋರ್ಟ್‌ಗೆ ಹಾಜರುಪಡಿಸಲು ಜಡ್ಜ್ ಆದೇಶ

ರಾಮಚಂದ್ರ ಅವರಿಗೆ ಚಾಕುವಿನಿಂದ ಇರಿದ ಬಳಿಕ, ಹಲ್ಲೆಕೋರರು ತಾವು ಬಂದಿದ್ದ ಕ್ಯಾಬ್‌ನಲ್ಲೇ ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು. ಆದರೆ, ಬೆಂಗಳೂರಿನ ಎಂದಿನ ರಸ್ತೆ ಸಂಚಾರ ದಟ್ಟಣೆಯಿಂದಾಗಿ (Traffic Jam) ಇವರ ಕ್ಯಾಬ್ ಮುಂದೆ ಚಲಿಸಲಾಗದೆ ರಸ್ತೆಯಲ್ಲೇ ಸಿಲುಕಿಕೊಂಡಿದೆ. ಈ ವೇಳೆ ಸ್ಥಳೀಯ ಸಾರ್ವಜನಿಕರು ತಮ್ಮನ್ನು ಹಿಡಿಯಲು ಬೆನ್ನಟ್ಟಿ ಬರುತ್ತಿರುವುದನ್ನು ಕಂಡ ಯುವಕರು ಗಾಬರಿಯಿಂದ ಕ್ಯಾಬ್‌ನಿಂದ ಇಳಿದು ಪಕ್ಕದಲ್ಲೇ ಇದ್ದ ಬೇಕರಿಯೊಂದರ ಒಳಗೆ ನುಗ್ಗಿದ್ದಾರೆ.

ಆದರೆ ಬಿಡದ ಸಾರ್ವಜನಿಕರು ಬೇಕರಿ ಒಳಗೆ ನುಗ್ಗಿ ಇಬ್ಬರೂ ಹಲ್ಲೆಕೋರರನ್ನು ವಶಕ್ಕೆ ಪಡೆದು, ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾಗಿರುವ ರಾಮಚಂದ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *