ಮುಂಬೈನ ಗೋವಂಡಿಯಲ್ಲಿ ತ್ರಿಕೋಣ ಪ್ರೇಮದಿಂದಾಗಿ ಯುವತಿಯೊಬ್ಬಳು ಗುಂಡೇಟಿಗೆ ಬಲಿಯಾದ ಘಟನೆ ನಡೆದಿದೆ. ಮುಂಬೈನ ಶಿವಾಜಿ ನಗರ ಪ್ರದೇಶದಲ್ಲಿ 19 ವರ್ಷದ ಶಿಫಾ ಎಂಬ ಯುವತಿಯನ್ನು ಮಧ್ಯಾಹ್ನ ವೇಳೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಟೀ ಕುಡಿಯಲು ಮನೆಯಿಂದ ಹೊರಟಿದ್ದ ಶಿಫಾ, ಕೆಲವೇ ಕ್ಷಣಗಳಲ್ಲಿ ರಸ್ತೆಯಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಲವ್ ಟ್ರಯಾಂಗಲ್ ಈ ಕೊಲೆಗೆ ಕಾರಣವಾಗಿರಬಹುದು.
ಇದನ್ನೂ ಓದಿ: 1 ಸಾವಿರ ರೂ.ಗೆ ಪತ್ನಿಯನ್ನೇ ಮಾರಿದ ಪತಿ! ಬಳಿಕ ನಡೆದಿದ್ದೇ ಅಮಾನವೀಯ ಕೃತ್ಯ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ 23 ವರ್ಷದ ಬಾಯ್ಫ್ರೆಂಡ್ ಹಾಗೂ ಆತನೊಂದಿಗೆ ಸಂಪರ್ಕದಲ್ಲಿದ್ದ 25 ವರ್ಷದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊದಲ ಪ್ರೇಯಸಿ ಸಂಬಂಧದ ವಿಚಾರವಾಗಿ ಪ್ರಶ್ನೆ ಮಾಡಿದ ನಂತರ, ಇಬ್ಬರು ಸೇರಿ ಶಿಫಾಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶಿಫಾಳ ತಲೆ, ಕೆನ್ನೆ ಮತ್ತು ಕುತ್ತಿಗೆ ಭಾಗಕ್ಕೆ ಗುಂಡೇಟು ತಗುಲಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
“ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ದೃಶ್ಯ, ಮೊಬೈಲ್ ಕಾಲ್ ರೆಕಾರ್ಡ್ ಹಾಗೂ ಲೊಕೇಶನ್ ಡೇಟಾ ಪರಿಶೀಲನೆ ನಡೆಯುತ್ತಿದೆ. ತನಿಖೆ ಇನ್ನೂ ಮುಂದುವರಿದಿದೆ” ಎಂದು ಪೊಲೀಸರು ಹೇಳಿದ್ದಾರೆ.

ಮೃತ ಶಿಫಾ ತನ್ನ ಪೋಷಕರು ಮತ್ತು ಇಬ್ಬರು ಸಹೋದರರೊಂದಿಗೆ ಗೋವಂಡಿಯಲ್ಲಿ ವಾಸವಾಗಿದ್ದಳು. ಈ ಘಟನೆ ಕುಟುಂಬವನ್ನು ಆಘಾತಕ್ಕೊಳಪಡಿಸಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

