ಸುಪ್ರೀಂಕೋರ್ಟ್ ತೀರ್ಪಿನ ಬೆನ್ನಲ್ಲೇ ಮಂಗಳೂರಿಗೆ ‘ವಾಕಬಿಲಿಟಿ ಆಡಿಟ್’ ಬೇಡಿಕೆ, ಸಿಎಂ‌ ಡಿಕೆಶಿಗೆ ಸಂಸದ ಚೌಟ ಪತ್ರ

ಮಂಗಳೂರು: ನಗರದ ಮುಂಬರುವ ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಆದ್ಯತೆ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪಾದಚಾರಿಗಳ ಹಕ್ಕುಗಳ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ಸಂಸದರು, ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ನಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Advertisement

ಪಾದಚಾರಿ ಮೂಲಸೌಕರ್ಯಗಳನ್ನು ನಿರ್ಮಿಸಿ, ಅವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು ಸ್ಥಳೀಯ ಸಂಸ್ಥೆಗಳು ಮತ್ತು ಯೋಜನಾ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಪತ್ರದ ಪ್ರತಿಯನ್ನು ನಗರಾಭಿವೃದ್ಧಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಮುಡಾ ಆಯುಕ್ತರಿಗೂ ಕಳುಹಿಸಲಾಗಿದೆ.

ಪಾದಚಾರಿಗಳಿಗೆ ಆದ್ಯತೆ ಅಗತ್ಯ

ಮಂಗಳೂರು ನಗರದ ಭವಿಷ್ಯದ ಅಭಿವೃದ್ಧಿಗೆ ಮಾರ್ಗದರ್ಶಕವಾಗಿರುವ ಮಾಸ್ಟರ್ ಪ್ಲಾನ್‌ನಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಅನುಕೂಲಕರ ಸಂಚಾರಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ದಿನನಿತ್ಯದ ಪ್ರಯಾಣಿಕರು ಹಾಗೂ ಕಾರ್ಮಿಕರು ಸೇರಿದಂತೆ ಸಾವಿರಾರು ಜನರು ತಮ್ಮ ದೈನಂದಿನ ಸಂಚಾರಕ್ಕಾಗಿ ನಡಿಗೆಯನ್ನೇ ಅವಲಂಬಿಸಿರುವುದನ್ನು ಉಲ್ಲೇಖಿಸಿರುವ ಅವರು, ನಗರ ವಿಸ್ತರಣೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಹಾಗೂ ಪಾದಚಾರಿ ಸ್ನೇಹಿ ಫುಟ್‌ಪಾತ್‌ಗಳ ನಿರ್ಮಾಣ ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

ಸಮಗ್ರ ಪಾದಚಾರಿ ಸಂಚಾರ ವ್ಯವಸ್ಥೆಗೆ ಸಲಹೆ

ಮಂಗಳೂರಿನಲ್ಲಿ ಸಮಗ್ರ ಪಾದಚಾರಿ ಸಂಚಾರ ವ್ಯವಸ್ಥೆಯನ್ನು ರೂಪಿಸುವಂತೆ ಮನವಿ ಮಾಡಿರುವ ಸಂಸದರು, ಅಡೆತಡೆ ರಹಿತ ಫುಟ್‌ಪಾತ್‌ಗಳು, ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಮಾರುಕಟ್ಟೆಗಳು ಹಾಗೂ ಸಾರಿಗೆ ಕೇಂದ್ರಗಳ ಬಳಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ 14 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ 57 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ ಮಹತ್ವದ ಮಾಹಿತಿ

ಅಲ್ಲದೆ, ವಿಶೇಷಚೇತನರಿಗೆ ಅನುಕೂಲವಾಗುವ ಮೂಲಸೌಕರ್ಯ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದಿಗೆ ಉತ್ತಮ ಸಂಪರ್ಕ, ಫುಟ್‌ಪಾತ್‌ಗಳ ಮೇಲಿನ ಅತಿಕ್ರಮಣ ತೆರವು ಹಾಗೂ ಅನಧಿಕೃತ ವಾಹನ ನಿಲುಗಡೆ ತಡೆಯುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

‘ವಾಕಬಿಲಿಟಿ ಆಡಿಟ್’ಗೆ ಆಗ್ರಹ

ಮಾಸ್ಟರ್ ಪ್ಲಾನ್ ಅಂತಿಮಗೊಳಿಸುವ ಮುನ್ನ ಮಂಗಳೂರು ನಗರದ ಸಮಗ್ರ ‘ವಾಕಬಿಲಿಟಿ (Walkability) ಆಡಿಟ್’ ಮತ್ತು ಪಾದಚಾರಿ ಮೂಲಸೌಕರ್ಯಗಳ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಸಂಸದರು ಆಗ್ರಹಿಸಿದ್ದಾರೆ.

ಈ ಆಡಿಟ್ ಮೂಲಕ ಪಾದಚಾರಿ ಸಂಚಾರಕ್ಕೆ ಸಂಬಂಧಿಸಿದ ಲೋಪದೋಷಗಳನ್ನು ಗುರುತಿಸಿ, ನಗರ ಯೋಜನೆಯಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಅಳವಡಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಂಗಳೂರಿನಲ್ಲಿ ಬೆಳೆದ ನಾಗರಿಕ ಹಾಗೂ ವಿದ್ಯಾರ್ಥಿಯಾಗಿ ಪಾದಚಾರಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮಗೆ ನೇರ ಅನುಭವವಿದ್ದು, ಪರಿಣಾಮಕಾರಿ ಯೋಜನೆ ರೂಪಿಸಲು ಜಿಲ್ಲಾಡಳಿತ, ಮುಡಾ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಹಕರಿಸಲು ಸಿದ್ಧ ಎಂದು ಸಂಸದರು ತಿಳಿಸಿದ್ದಾರೆ.

‘ಪಾದಚಾರಿ ಸ್ನೇಹಿ ನಗರ’ದ ವೈಶಿಷ್ಟ್ಯ ಉಳಿಯಲಿ

“ಮಂಗಳೂರು ಐತಿಹಾಸಿಕವಾಗಿ ಅಚ್ಚುಕಟ್ಟಾದ ಹಾಗೂ ಪಾದಚಾರಿ ಸ್ನೇಹಿ ನಗರವಾಗಿ ಗುರುತಿಸಿಕೊಂಡಿದೆ. ನಗರವು ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಈ ಸಂದರ್ಭದಲ್ಲಿ ಆ ವೈಶಿಷ್ಟ್ಯವನ್ನು ಉಳಿಸಿಕೊಂಡು ಮತ್ತಷ್ಟು ಬಲಪಡಿಸುವುದು ರಸ್ತೆ ಸುರಕ್ಷತೆ, ಸಾರ್ವಜನಿಕ ಆರೋಗ್ಯ, ಪರಿಸರ ಸುಸ್ಥಿರತೆ ಹಾಗೂ ನಾಗರಿಕರ ಜೀವನಮಟ್ಟ ಸುಧಾರಣೆಗೆ ಮಹತ್ವದ ಕೊಡುಗೆ ನೀಡಲಿದೆ” ಎಂದು ಕ್ಯಾ. ಬ್ರಿಜೇಶ್ ಚೌಟ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *