ಟ್ರಾಫಿಕ್ ಫೈನ್ ಶೇ.50 ಡಿಸ್ಕೌಂಟ್ ಧಮಾಕಾ!: ಒಂದೇ ಬಾರಿಗೆ 100 ಕೇಸ್‌ಗಳ ದಂಡ ಕಟ್ಟಿ ರೆಕಾರ್ಡ್ ಬರೆದ ಬೆಂಗಳೂರಿಗ

ಬೆಂಗಳೂರು: ವಾಹನ ಸವಾರರ ಮೇಲಿರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇ. 50ರಷ್ಟು ಭರ್ಜರಿ ರಿಯಾಯಿತಿ ಯೋಜನೆಗೆ ಸಿಲಿಕಾನ್ ಸಿಟಿಯಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಮಧ್ಯೆ, ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಾಗರಿಕರೊಬ್ಬರು ತಮ್ಮ ವಾಹನದ ಮೇಲಿದ್ದ ಬರೋಬ್ಬರಿ 100 ಟ್ರಾಫಿಕ್ ಕೇಸ್‌ಗಳ ದಂಡವನ್ನು ಒಂದೇ ಬಾರಿಗೆ ಪಾವತಿಸಿ ಗಮನ ಸೆಳೆದಿದ್ದಾರೆ.

ರಾಜಾಜಿನಗರದ ನಿವಾಸಿಯೊಬ್ಬರ ವಾಹನದ ಮೇಲೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬರೋಬ್ಬರಿ 100 ಪ್ರಕರಣಗಳು ದಾಖಲಾಗಿದ್ದವು. ಸದ್ಯ ಸರ್ಕಾರ ನೀಡಿರುವ ಸುವರ್ಣಾವಕಾಶವನ್ನು ಬಳಸಿಕೊಂಡ ಆ ಸವಾರ, ತಕ್ಷಣವೇ ಠಾಣೆಗೆ ಧಾವಿಸಿ ಶೇ. 50ರಷ್ಟು ರಿಯಾಯಿತಿ ಸೌಲಭ್ಯದಡಿ ಒಟ್ಟು 27,500 ರೂಪಾಯಿ ದಂಡದ ಹಣವನ್ನು ಪಾವತಿ ಮಾಡಿ ಎಲ್ಲಾ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಂಡಿದ್ದಾರೆ. ದಂಡ ಪಾವತಿಸಿದ ಬಳಿಕ ಮಾತನಾಡಿದ ಅವರು, “ಇನ್ಮುಂದೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತೇನೆ ಹಾಗೂ ಸುರಕ್ಷಿತ ಚಾಲನೆಗೆ ಆದ್ಯತೆ ನೀಡುತ್ತೇನೆ” ಎಂದು ಪ್ರಮಾಣ ಮಾಡಿದ್ದಾರೆ.

Advertisement

ಇಲ್ಲಿದೆ ನೋಡಿ ಎಕ್ಸ್​ ಪೋಸ್ಟ್;


ರಾಜ್ಯ ಸರ್ಕಾರ ಹಾಗೂ ಸಂಚಾರ ಪೊಲೀಸ್ ಇಲಾಖೆಯು ಜೂನ್ 21ರಿಂದ ಜುಲೈ 10ರವರೆಗೆ ಮಾತ್ರ ಬಾಕಿ ಇರುವ ಟ್ರಾಫಿಕ್ ಫೈನ್‌ಗಳ ಮೇಲೆ ಈ ಶೇ. 50 ರಿಯಾಯಿತಿ ಸೌಲಭ್ಯವನ್ನು ನೀಡಿದೆ. ಹೀಗಾಗಿ ನಿಗದಿತ ಅವಧಿಯೊಳಗೆ ವಾಹನ ಸವಾರರು ತಮ್ಮ ಮೇಲಿರುವ ಬಾಕಿ ದಂಡವನ್ನು ಆನ್‌ಲೈನ್ ಅಥವಾ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳ ಮೂಲಕ ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಖಾಕಿ ದರ್ಪ!: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್!

“ದಂಡದ ಮೇಲಿನ ರಿಯಾಯಿತಿಯು ಕೇವಲ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ನೀಡಲಾದ ಅವಕಾಶವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ, ಸವಾರರು ರಸ್ತೆ ಶಿಸ್ತನ್ನು ರೂಢಿಸಿಕೊಳ್ಳಬೇಕು. ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದ ಮಾತ್ರ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ಸುರಕ್ಷಿತ ಬೆಂಗಳೂರನ್ನು ನಿರ್ಮಿಸಲು ಸಾಧ್ಯ” ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *