ತುಮಕೂರು: ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ಬೆಂಗಳೂರಿನಿಂದ ಕಾರಿನಲ್ಲಿ ಅಪಹರಿಸಿಕೊಂಡು ಹೋಗುತ್ತಿದ್ದ ಯುವಕನೊಬ್ಬ, ಚಲಿಸುವ ಕಾರಿನಲ್ಲೇ ನಾಡಬಾಂಬ್ (Nada Bomb) ಸ್ಫೋಟಿಸಿಕೊಂಡು ಭೀಕರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಶನಿವಾರ ಮಧ್ಯಾಹ್ನ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ನಾಗೇಂದ್ರ (30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಭೀಕರ ಬಾಂಬ್ ಸ್ಫೋಟದ ನಡುವೆಯೂ ಕಾರಿನಲ್ಲಿದ್ದ ಅಪಹರಣಕ್ಕೊಳಗಾಗಿದ್ದ ಯುವತಿ ಹಾಗೂ ಕಾರು ಚಾಲಕ ಇಬ್ಬರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ. ವೆಂಕಟ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕಾರಿನಲ್ಲಿ ಮತ್ತೊಂದು ಜೀವಂತ ನಾಡಬಾಂಬ್ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ನಡುಕ ಹುಟ್ಟಿಸಿದೆ.

ಪ್ರೇಮ ವೈಫಲ್ಯವೇ ದುರಂತಕ್ಕೆ ಕಾರಣ: ನಡೆದಿದ್ದೇನು?
ಪೊಲೀಸ್ ತನಿಖೆಯ ಪ್ರಾಥಮಿಕ ವಿವರಗಳ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಮೂಲದ ರಮ್ಯಾ ಹಾಗೂ ಮೃತ ನಾಗೇಂದ್ರ ಕಳೆದ ಏಳೆಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರಸ್ತುತ ರಮ್ಯಾ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ (Lab Technician) ಆಗಿ ಕೆಲಸ ಮಾಡುತ್ತಿದ್ದರೆ, ನಾಗೇಂದ್ರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಇಬ್ಬರ ನಡುವೆ ಮದುವೆ ವಿಚಾರವಾಗಿ ತೀವ್ರ ಭಿನ್ನಾಭಿಪ್ರಾಯ ಮೂಡಿತ್ತು. ನಾಗೇಂದ್ರನ ವರ್ತನೆಯಿಂದ ಬೇಸತ್ತಿದ್ದ ರಮ್ಯಾ ಆತನೊಂದಿಗೆ ಮದುವೆಯಾಗಲು ಸ್ಪಷ್ಟವಾಗಿ ನಿರಾಕರಿಸಿದ್ದಳು.
ಪಿಜಿ ಬಳಿ ತೆರಳಿ ಯುವತಿಯ ಬಲವಂತದ ಕಿಡ್ನ್ಯಾಪ್:
ರಮ್ಯಾ ತನ್ನನ್ನು ಮದುವೆಯಾಗಲು ಒಪ್ಪದಿದ್ದಕ್ಕೆ ತೀವ್ರ ಕೋಪಗೊಂಡಿದ್ದ ನಾಗೇಂದ್ರ, ಆಕೆಯನ್ನು ಕೊಲ್ಲಲು ಅಥವಾ ಹೆದರಿಸಲು ಮೊದಲೇ ಪ್ಲಾನ್ ಮಾಡಿ ತಾನೇ ಸ್ವತಃ ನಾಡಬಾಂಬ್‌ಗಳನ್ನು ತಯಾರಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಶನಿವಾರದಂದು ಬಾಡಿಗೆ ಕಾರೊಂದನ್ನು (Rental Cab) ಬುಕ್ ಮಾಡಿಕೊಂಡ ನಾಗೇಂದ್ರ, ಬೆಂಗಳೂರಿನಲ್ಲಿ ರಮ್ಯಾ தಂಗಿದ್ದ ಪಿಜಿ (PG) ಬಳಿ ತೆರಳಿದ್ದಾನೆ. ಅಲ್ಲಿ ರಮ್ಯಾಳನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾನೆ. ರಮ್ಯಾ ದಿಢೀರನೆ ನಾಪತ್ತೆಯಾದದ್ದನ್ನು ಗಮನಿಸಿದ ಆಕೆಯ ಸ್ನೇಹಿತೆ ತಕ್ಷಣವೇ ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು ಅಲರ್ಟ್ ಆಗಿ ಕಾರನ್ನು ಪತ್ತೆಹಚ್ಚುವ ಮುನ್ನವೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಚಲಿಸುತ್ತಿದ್ದಾಗ ನಾಗೇಂದ್ರ ತನ್ನ ಬಳಿಯಿದ್ದ ನಾಡಬಾಂಬ್ ಒಂದನ್ನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ನಾಗೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನ ಮುಂಭಾಗ ಜರ್ಜರಿತಗೊಂಡಿದೆ. ಸದ್ಯ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪಾರಾದ ಯುವತಿ ಮತ್ತು ಚಾಲಕನಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

