ಮಂಗಳೂರು: ದೇಶದಲ್ಲಿ ಮೂತ್ರಪಿಂಡ (ಕಿಡ್ನಿ) ಸೇರಿದಂತೆ ವಿವಿಧ ಅಂಗಾಂಗ ಕಸಿ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ತರಲು ಮತ್ತು ಆಸ್ಪತ್ರೆಗಳ ಹೊಣೆಗಾರಿಕೆಯನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಇಲಾಖೆಯ ವ್ಯಾಪ್ತಿಯ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO) ಐತಿಹಾಸಿಕ ಮಹತ್ವದ ಕ್ರಮ ಕೈಗೊಂಡಿದೆ. ಇನ್ಮುಂದೆ ದೇಶದ ಎಲ್ಲಾ ನೋಂದಾಯಿತ ಅಂಗಾಂಗ ಕಸಿ ಆಸ್ಪತ್ರೆಗಳು ತಮ್ಮ ಅಧಿಕೃತ ವೆಬ್‌ಸೈಟ್‌ಗಳ ಮುಖಪುಟದಲ್ಲೇ (Homepage) ಕಸಿ ಪ್ರಕ್ರಿಯೆಯ ಫಲಿತಾಂಶಗಳ ದತ್ತಾಂಶಗಳನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ನೋಟೋ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕರ್ನಾಟಕದ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಅಂಗಾಂಗ ಕಸಿ ಪ್ರಕರಣಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ‘ನೋಟೋ’ ನಿರ್ದೇಶಕ ಡಾ. ಅನಿಲ್ ಕುಮಾರ್ ಅವರಿಗೆ ಬರೆದಿದ್ದ ಪತ್ರಕ್ಕೆ ಈ ಬಿಗ್ ಮನ್ನಣೆ ಸಿಕ್ಕಿದೆ.

ಮಂಗಳೂರಿನ ಪ್ರಖ್ಯಾತ ಆರೋಗ್ಯ ತಜ್ಞರಾದ ಶ್ಯಾಮ್ ಕಾಮತ್ ಮತ್ತು ಡಾ. ಲಿಯೋನೆಲ್ ಡಿಸೋಜಾ ಅವರು ಸಿದ್ಧಪಡಿಸಿ ಸಲ್ಲಿಸಿದ್ದ ಸಮಗ್ರ ವರದಿಯೊಂದನ್ನು ಆಧರಿಸಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮೇ 22 ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ತಜ್ಞರ ವರದಿಯು ಅಂಗಾಂಗ ಕಸಿ ಪ್ರಕ್ರಿಯೆಗಳ ನಂತರದ ಮರಣ ಪ್ರಮಾಣ ಮತ್ತು ರೋಗಿಗಳ ದೀರ್ಘಕಾಲೀನ ನಿಗಾ ವ್ಯವಸ್ಥೆಯಲ್ಲಿರುವ ಗಂಭೀರ ನ್ಯೂನತೆಗಳನ್ನು ಎತ್ತಿ ತೋರಿಸಿತ್ತು.
ಸಂಸದರ ಪತ್ರದಲ್ಲಿದ್ದ ಆತಂಕಗಳೇನು?:
ಅಲ್ಪಾವಧಿ ಯಶಸ್ಸಿನ ಪ್ರದರ್ಶನ: ಆಸ್ಪತ್ರೆಗಳು ಕೇವಲ ಕಿಡ್ನಿ ಕಸಿಯ ಅಲ್ಪಾವಧಿಯ ಯಶಸ್ಸನ್ನು ಮಾತ್ರ ಬಿಂಬಿಸುತ್ತಿದ್ದು, ರೋಗಿಗಳು ದೀರ್ಘಕಾಲದವರೆಗೆ ಎದುರಿಸುವ ಜೀವನ್ಮರಣ ಸವಾಲುಗಳನ್ನು ನಿರ್ಲಕ್ಷಿಸುತ್ತಿವೆ.
ಚಿಕಿತ್ಸೆಯ ದೀರ್ಘಕಾಲೀನ ವಿಷತ್ವ: ಕಸಿ ನಂತರ ನೀಡಲಾಗುವ ರೋಗ ನಿರೋಧಕ ಚಿಕಿತ್ಸೆಗಳಿಂದಾಗಿ ರೋಗಿಗಳು ತೀವ್ರ ಆರೋಗ್ಯ ತೊಂದರೆ, ದೀರ್ಘಕಾಲದ ವಿಷತ್ವ , ಶಾರೀರಿಕ ದೌರ್ಬಲ್ಯ ಮತ್ತು ಮಾರಕ ಸೋಂಕುಗಳಿಗೆ ಒಳಗಾಗುತ್ತಿದ್ದಾರೆ.
ಕೇಂದ್ರೀಕೃತ ವ್ಯವಸ್ಥೆಯ ಕೊರತೆ: ಡಿಸ್ಚಾರ್ಜ್ ಆದ ನಂತರದ ದೀರ್ಘಕಾಲದ ಬದುಕುಳಿಯುವಿಕೆ ಮತ್ತು ಮರಣದ ಕಾರಣಗಳನ್ನು ಪತ್ತೆಹಚ್ಚಲು ಕೇಂದ್ರೀಕೃತ ರಾಷ್ಟ್ರೀಯ ವ್ಯವಸ್ಥೆಯ ಕೊರತೆಯಿದೆ ಎಂದು ಚೌಟ ವಿವರಿಸಿದ್ದರು.
ಪ್ರಸ್ತುತ ದೇಶಾದ್ಯಂತ 824 ಕಸಿ ಕೇಂದ್ರಗಳು ನೋಟೋ ಸಂಸ್ಥೆಯ ರಿಜಿಸ್ಟ್ರಿಯೊಂದಿಗೆ ಲಿಂಕ್ ಆಗಿದ್ದು, ಇವುಗಳಿಗೆ ಹೊಸ ನಿಯಮಗಳು ಕಡ್ಡಾಯವಾಗಿ ಅನ್ವಯಿಸಲಿವೆ.
ಸಮಯಾವಾರು ಬದುಕುಳಿಯುವಿಕೆಯ ದರ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 6 ತಿಂಗಳು, 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯಲ್ಲಿ ಎಷ್ಟು ರೋಗಿಗಳು ಜೀವಂತವಾಗಿದ್ದಾರೆ, ಎಷ್ಟು ಜನ ಮೃತಪಟ್ಟಿದ್ದಾರೆ ಮತ್ತು ಎಷ್ಟು ಜನರಲ್ಲಿ ಕಸಿ ವಿಫಲವಾಗಿದೆ ಎಂಬ ಸಂಪೂರ್ಣ ವಿವರಗಳನ್ನು ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು.
ರೋಗಿಗಳಿಗೆ ಮುಂಚಿತವಾಗಿ ಮಾಹಿತಿ: ಕಸಿ ಪ್ರಕ್ರಿಯೆಗೆ ಮುನ್ನವೇ ರೋಗಿ ಮತ್ತವರ ಕುಟುಂಬಕ್ಕೆ ಅದರಲ್ಲಿರುವ ಅಪಾಯಗಳು ಹಾಗೂ ನೈಜ ಫಲಿತಾಂಶಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ರಾಜ್ಯ ಸರ್ಕಾರಗಳಿಗೆ ಜವಾಬ್ದಾರಿ: ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಸಿ ಆಸ್ಪತ್ರೆಗಳು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ರಾಷ್ಟ್ರೀಯ ನೋಂದಣಿಗೆ ಸಕಾಲದಲ್ಲಿ ಸಂಪೂರ್ಣ ದತ್ತಾಂಶ ಸಲ್ಲಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.
“ಆಸ್ಪತ್ರೆಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲು. ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಮ್ಮ ಕೇಂದ್ರ ಸರ್ಕಾರ ತ್ವರಿತಗತಿಯ ತೀರ್ಮಾನಗಳನ್ನು ಹೇಗೆ ಕೈಗೊಳ್ಳುತ್ತದೆ ಎಂಬುದಕ್ಕೆ ಇದೊಂದು ಸಾಕ್ಷಿ.”
— ಕ್ಯಾ. ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

