ಕಾಂಕ್ರೀಟ್ ರಸ್ತೆಯಲ್ಲಿ ಕರೆಂಟ್ ಕಂಬವೋ..? ಕಂಬದ ಸುತ್ತ ರಸ್ತೆಯೋ..?: ಸುಳ್ಯ ನಗರಸಭೆ ಎಂಜಿನಿಯರಿಂಗ್‌ ‘ಅದ್ಭುತ’ಕ್ಕೆ ಸಾರ್ವಜನಿಕರು ಫುಲ್ ಶಾಕ್

ಸುಳ್ಯ: ಸಾಮಾನ್ಯವಾಗಿ ಯಾವುದೇ ರಸ್ತೆಯನ್ನು ಕಾಂಕ್ರೀಟೀಕರಣ ಮಾಡುವ ಮುನ್ನ ಅಲ್ಲಿ ಸಾರ್ವಜನಿಕರಿಗೆ ಅಥವಾ ವಾಹನ ಸಂಚಾರಕ್ಕೆ ಅಡ್ಡಿಯಾಗುವ ವಿದ್ಯುತ್ ಕಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದಲ್ಲಿ ಮಾತ್ರ ಇಡೀ ವ್ಯವಸ್ಥೆಯೇ ಉಲ್ಟಾ ಹೊಡೆದಿದೆ! ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಕಂಬವನ್ನು ಶಿಫ್ಟ್ ಮಾಡದೆಯೇ, ಅದರ ಸುತ್ತಲೂ ಕಾಂಕ್ರೀಟ್ ಹಾಕಿ ರಸ್ತೆ ನಿರ್ಮಿಸಿರುವ ವಿಲಕ್ಷಣ ಮತ್ತು ಬೇಜವಾಬ್ದಾರಿತನದ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ರಸ್ತೆಯಲ್ಲಿ ಸಾಗುವ ಸವಾರರಿಗೆ “ಕಾಂಕ್ರೀಟ್ ರಸ್ತೆಯಲ್ಲಿ ಕರೆಂಟ್ ಕಂಬವೋ ಅಥವಾ ಕರೆಂಟ್ ಕಂಬದ ಸುತ್ತ ಕಾಂಕ್ರೀಟ್ ರಸ್ತೆಯೋ?” ಎಂಬ ದೊಡ್ಡ ಜಿಜ್ಞಾಸೆ ಮೂಡದೇ ಇರದು.

Advertisement

ಸುಳ್ಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೆಳಭಾಗದಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಡೆಗೆ ತೆರಳುವ ಪ್ರಮುಖ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ರಸ್ತೆಯ ಕೆಲವು ಭಾಗಗಳನ್ನು ಇತ್ತೀಚೆಗಷ್ಟೇ ಕಾಂಕ್ರೀಟೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಸ್ತೆ ವ್ಯಾಪ್ತಿಯಲ್ಲಿದ್ದ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡುವ ಗೋಜಿಗೆ ಹೋಗಿಲ್ಲ. ಕಂಬವನ್ನು ರಸ್ತೆಯಲ್ಲೇ ಹಾಗೆಯೇ ಉಳಿಸಿ, ಅದರ ಸುತ್ತಲೂ ಕಾಂಕ್ರೀಟ್ ಸುರಿದು ಕೈತೊಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿದ ಬಳಿಕವಷ್ಟೇ ರಸ್ತೆ ಕಾಂಕ್ರೀಟ್ ಮಾಡುವುದು ನಿಯಮ. ಆದರೆ ಇಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಈ ರಸ್ತೆಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳಿಂದ ದಿನದ 24 ಗಂಟೆಯೂ ಬ್ಯುಸಿಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಮಧ್ಯದಲ್ಲೇ ಇರುವ ಕಂಬಕ್ಕೆ ನಡುರಾತ್ರಿ ಅಥವಾ ಮಳೆಗಾಲದ ಸಮಯದಲ್ಲಿ ವಾಹನಗಳು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ; ಸುಳ್ಯದ ಗ್ರಾಮೀಣ ಜನತೆಗೆ ಶಾಸಕರಿಂದ ದೊಡ್ಡ ಗಿಫ್ಟ್! 1.35 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿಪೂಜೆ!

ಸ್ಥಳೀಯ ನಾಗರಿಕರು ಹಾಗೂ ವಾಹನ ಸವಾರರು ಈ ಅವಾಂತರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಸಂಬಂಧಪಟ್ಟ ನಗರಸಭೆ ಮತ್ತು ಮೆಸ್ಕಾಂ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಕಂಬವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *