ರಾಮನಗರದಲ್ಲಿ ‘SIR’ ಅಕ್ರಮ, ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು? ವಿಡಿಯೋ ಬಿಡುಗಡೆ ಮಾಡಿ ಸಿಎಂ ವಿರುದ್ಧ ಎಚ್‌ಡಿಕೆ ಗಂಭೀರ ಆರೋಪ

ಬೆಂಗಳೂರು: ರಾಜ್ಯದಲ್ಲಿ ಆರಂಭವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR – Special Intensive Revision) ಪ್ರಕ್ರಿಯೆಯು ಇದೀಗ ಭಾರಿ ರಾಜಕೀಯ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ರಾಮನಗರದಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದ್ದು, ಮುಖ್ಯಮಂತ್ರಿಗಳ ಪ್ರಭಾವ ಬಳಸಿ ಬಾಂಗ್ಲಾದೇಶದ ವಲಸಿಗರನ್ನು ಕಳ್ಳ ಮತದಾರರನ್ನಾಗಿ ಪೋಷಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ನಡೆಸಿದ ದಿಢೀರ್ ಸುದ್ದಿಗೋಷ್ಠಿಯು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.

ಗ್ಯಾರಂಟಿ ಯೋಜನೆಗಳ ಲಿಂಕ್ ಹಾಗೂ ಜೆಡಿಎಸ್ ಅನುಮಾನ:

Advertisement

ರಾಜ್ಯದಲ್ಲಿ ‘ಎಸ್​ಐಆರ್’ ಪ್ರಕ್ರಿಯೆ ಚುರುಕಾಗಿ ಸಾಗುತ್ತಿರುವ ಬೆನ್ನಲ್ಲೇ, ಸಾರ್ವಜನಿಕರು ನಿಗದಿತ ಅವಧಿಯಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ ಭವಿಷ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಯಾವುದೇ ಸರ್ಕಾರಿ ಸವಲತ್ತುಗಳು ಸಿಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಈ ಪ್ರಕ್ರಿಯೆಯ ಪರವಾಗಿ ಕಟುವಾದ ಪದಗಳನ್ನು ಬಳಸಿ ಮಾತನಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಜೆಡಿಎಸ್ ನಾಯಕರು ಆಕ್ಷೇಪ ಎತ್ತಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಕಳ್ಳ ಮತದಾರರ ಒಟ್ಟುಗೂಡಿಸುವಿಕೆ!

ರಾಮನಗರದ ಬೆಳವಣಿಗೆಗಳ ಕುರಿತು ಆಘಾತಕಾರಿ ವಿಡಿಯೋ ಬಿಡುಗಡೆ ಮಾಡಿರುವ ಎಚ್.ಡಿ. ಕುಮಾರಸ್ವಾಮಿ, “ನಿಯಮಾವಳಿಗಳ ಪ್ರಕಾರ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಆದರೆ, ಸಿಎಂ ಪ್ರಭಾವ ಬಳಸಿ ಸಾವಿರಾರು ಜನರನ್ನು ಒಂದೇ ಕಡೆಯಿರುವ ದೊಡ್ಡ ಕಲ್ಯಾಣ ಮಂಟಪ ಅಥವಾ ಚೌಟ್ರಿಗಳಲ್ಲಿ ಒಟ್ಟಿಗೆ ಕೂರಿಸಿ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಹೀಗೆ ಒಂದೇ ಸೂರಿನಡಿ ಕಳ್ಳ ಮತದಾರರನ್ನು ಒಟ್ಟುಗೂಡಿಸಿ ಅವರಿಗೆ ಕಾನೂನುಬಾಹಿರವಾಗಿ ಮತದಾನದ ಹಕ್ಕು ಕಲ್ಪಿಸಲು ವ್ಯವಸ್ಥಿತ ಸಂಚು ರೂಪಿಸಲಾಗಿದೆ” ಎಂದು ದೂರಿದ್ದಾರೆ.

ಬಾಂಗ್ಲಾ ವಲಸಿಗರ ಪೋಷಣೆ ಮತ್ತು ಅಧಿಕಾರಿಗಳ ವೈಫಲ್ಯ:

ಈ ಇಡೀ ಅಕ್ರಮದ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವ ವಲಸಿಗರೂ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. “ದೇಶದ ಭದ್ರತೆಗೆ ಸವಾಲಾಗಿರುವ ಬಾಂಗ್ಲಾ ವಲಸಿಗರನ್ನು ರಾಮನಗರದಲ್ಲಿ ಇಟ್ಟುಕೊಂಡು ಪೋಷಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಅವರಿಗೆ ಅಧಿಕೃತ ದಾಖಲೆಗಳನ್ನು ಸೃಷ್ಟಿಸಲು ಈ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದು ಸಂಪೂರ್ಣವಾಗಿ ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳ ವೈಫಲ್ಯ” ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: SSLC ತೃತೀಯ ಭಾಷೆಗೆ ಮತ್ತೆ ಗ್ರೇಡ್ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಮುಂದು: ಖಾಸಗಿ ಶಾಲಾ ಒಕ್ಕೂಟಗಳ ತೀವ್ರ ವಿರೋಧ

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಆಯೋಗಕ್ಕೆ ದೂರು:

ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತಿರುವ ಈ ವಿದ್ಯಮಾನವನ್ನು ನಾನು ಇಲ್ಲಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿರುವ ಕುಮಾರಸ್ವಾಮಿ, ರಾಮನಗರದ ಈ ಅಕ್ರಮದ ಸಂಪೂರ್ಣ ವಿವರ ಹಾಗೂ ಲಭ್ಯವಿರುವ ವಿಡಿಯೋ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ದೂರು ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *