ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ ಮಂಗಳೂರು-ಕಾರ್ಕಳ ಹೆದ್ದಾರಿ ಸವಾರರು; ಕೆತ್ತಿಕಲ್ ಗುಡ್ಡ ಕುಸಿತಕ್ಕೆ ಒಂದು ಪಥ ಬಂದ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ವೇಳೆ ನಡೆದಿರುವ ಅವೈಜ್ಞಾನಿಕ ನಿರ್ಮಾಣವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡವನ್ನು ಲಂಬಾಕೃತಿಯಲ್ಲಿ ಕಡಿದಿರುವುದು ಪ್ರತಿ ಮಳೆಗಾಲದಲ್ಲೂ ಕೃತಕ ಭೂಕುಸಿತಕ್ಕೆ ದಾರಿ ಮಾಡಿಕೊಡುತ್ತಿದೆ.

ಕೇರಳದ ವಯನಾಡ್‌ನಲ್ಲಿ ಸುರಂಗ ಮಾರ್ಗ ನಿರ್ಮಿಸುವಾಗ ದುರಂತಕ್ಕೆ ಕಾರಣವಾಗಿದ್ದ ಅದೇ ಡಿಬಿಎಲ್ (DBL) ಕಂಪನಿಯೇ ಈ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕಂಪನಿಯ ತಾಂತ್ರಿಕ ವೈಫಲ್ಯ ಹಾಗೂ ಬೇಜವಾಬ್ದಾರಿತನದಿಂದಾಗಿ ಸದ್ಯ ಹೆದ್ದಾರಿ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

Advertisement

ಕಂಪನಿಯ ಅವೈಜ್ಞಾನಿಕ ವಿಧಾನಗಳಿಂದಾಗಿ ಕಳೆದ ಮೂರು ವರ್ಷಗಳಿಂದಲೂ ಕೆತ್ತಿಕಲ್ ಭಾಗದಲ್ಲಿ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಪ್ರಸ್ತುತ ಮಳೆ ತೀವ್ರಗೊಂಡ ಬೆನ್ನಲ್ಲೇ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಕುಸಿದು ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿಯ ಒಂದು ಬದಿಯ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಕೇವಲ ಒಂದು ಪಥದಲ್ಲಿ (Single Lane) ದ್ವಿಮುಖ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ವಾಹನ ಸವಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಕಳೆದ ವರ್ಷ ಗುಡ್ಡ ಕುಸಿತ ತಡೆಯಲು ಕಂಪನಿಯು ಅಳವಡಿಸಿದ್ದ ‘ಸಾಯಿಲ್ ನೇಲಿಂಗ್’ (Soil Nailing) ತಂತ್ರಜ್ಞಾನವು ಸಂಪೂರ್ಣವಾಗಿ ವಿಫಲವಾಗಿದೆ. ಮಳೆಯ ನೀರಿಗೆ ಮಣ್ಣು ಕೊಚ್ಚಿ ಹೋಗುತ್ತಿದ್ದು, ಪ್ರಸ್ತುತ ತರಾತುರಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಇಂಜಿನಿಯರ್‌ಗಳು ಮುಂದಾಗಿದ್ದಾರೆ. ಕೆತ್ತಿಕಲ್ ಮಾತ್ರವಲ್ಲದೆ, ಹೆದ್ದಾರಿಯ ಇತರ ಭಾಗಗಳಲ್ಲೂ ಇದೇ ರೀತಿಯಾಗಿ ಕಡಿದಾದ ಗುಡ್ಡಗಳನ್ನು ಲಂಬಾಕೃತಿಯಲ್ಲಿ ಅಗೆದು ಮುನ್ನೆಚ್ಚರಿಕೆ ವಹಿಸದೆ ಬಿಡಲಾಗಿದೆ.

ಇದನ್ನೂ ಓದಿ: ಮಂಗಳೂರು ನಾಗುರಿಯಲ್ಲಿ ಭೀಕರ ಮಳೆ ದುರಂತ: ಮನೆಗಳ ಮೇಲೆ ಕುಸಿದುಬಿದ್ದ ಕಾಂಪೌಂಡ್ ಗೋಡೆ; ಇಬ್ಬರು ಬಾಲಕಿಯರು ಸೇರಿ ಮೂವರು ಸ್ಥಳದಲ್ಲೇ ಸಾವು

200ಕ್ಕೂ ಹೆಚ್ಚು ಮನೆಗಳಿಗೆ ಅಪಾಯದ ಭೀತಿ!

ಒಂದು ವೇಳೆ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದರೆ, ಹೆದ್ದಾರಿಯ ಕೆಳಭಾಗದಲ್ಲಿರುವ 200ಕ್ಕೂ ಹೆಚ್ಚು ಮನೆಗಳು ಹಾಗೂ ಇಡೀ ಗ್ರಾಮವೇ ಮಣ್ಣಿನಡಿ ಸರಿಯುವ ಭೀತಿ ಎದುರಾಗಿದೆ. ಕಳೆದ ವರ್ಷ ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಮುನ್ನೆಚ್ಚರಿಕೆ ಕ್ರಮವಾಗಿ 12 ಮನೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಈ ಬಾರಿಯೂ ಅದೇ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ದೊಡ್ಡ ದುರಂತ ಸಂಭವಿಸುವುದು ಗ್ಯಾರಂಟಿ ಎಂದು ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *